ಹೊಸದಿಗಂತ ವರದಿ ಉಳ್ಳಾಲ:
ಖಾಸಗಿ ಶಾಲೆಗಳಿಗೆ ಸರಿಸಾಟಿಯಾಗುವ ರೀತಿಯಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಾಡೂರು ಸರ್ಕಾರಿ ಶಾಲೆಯ ಸಮಗ್ರ ಪ್ರಗತಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಅರಸು ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಲಾಗಿದ್ದು, ವಿಶೇಷವೆಂದರೆ ಇಲ್ಲಿ ಇತಿಹಾಸದಲ್ಲಿ ಗತಿಸಿಹೋದ ಗುರುಕುಲ ಶಿಕ್ಷಣ ಪದ್ಧತಿಯನ್ನು ಆಧರಿಸಿದ ತರಗತಿಯನ್ನು ಮಾಡೂರು ಸರ್ಕಾರಿ ಶಾಲೆಯಲ್ಲಿ ಆರಂಭಿಸಲು ಯೋಜನೆ ರೂಪಿಸಲಾಗಿದೆ.
ಶಾಲೆಯ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಶ್ರಮಿಸಿದವರು ಒಗ್ಗೂಡಿ ಟ್ರಸ್ಟ್ನ್ನು ರೂಪಿಸಿದ್ದು, ಶಿಕ್ಷಣದ ಜತೆಗೆ ಸಮಾಜಮುಖಿ ಚಟುವಟಿಕೆಗಳಿಗೂ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಟ್ರಸ್ಟ್ನ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿದ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಹಾಗೂ ಅರಸು ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಸುಜಿತ್ ಮಾಡೂರು, ಗುರುಕುಲ ಶಿಕ್ಷಣ ಪದ್ಧತಿಯನ್ನು ಆಧರಿಸಿದ ತರಗತಿ ಆರಂಭಿಸುವ ಯೋಜನೆಯ ಕುರಿತು ಮಾಹಿತಿ ನೀಡಿದರು.
ನೂತನವಾಗಿ ಸ್ಥಾಪನೆಗೊಂಡ ಅರಸು ಚಾರಿಟೇಬಲ್ ಟ್ರಸ್ಟ್ ಮಾಡೂರು ಶಾಲೆಗೆ ಮಾತ್ರ ಸೀಮಿತಗೊಳ್ಳದೆ ಇಡೀ ಕೋಟೆಕಾರು ಪಟ್ಟಣವನ್ನ ಕೇಂದ್ರೀಕರಿಸಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಿದ್ದು,ಶೀಘ್ರವೇ ಮಾಡೂರಿನಲ್ಲಿ ಟ್ರಸ್ಟ್ ನ ಪ್ರಧಾನ ಕಚೇರಿ ಆರಂಭಗೊಳ್ಳಲಿದೆ ಎಂದೂ ಅವರು ಮಾಹಿತಿ ನೀಡಿದರು.
ಮಾಡೂರು ಅರಸು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕಿಶೋರ್ ಅಂಚನ್, ಕೋಶಾಧಿಕಾರಿ ಶೇಖರ್ ದೇಂಬಲೆ, ಟ್ರಸ್ಟಿಗಳಾದ ಭಾಸ್ಕರ್ ಮಡ್ಯಾರ್, ಹರೀಶ್ ಕಣೀರುತೋಟ, ಪುರುಷೋತ್ತಮ ಗಟ್ಟಿ, ಶಶಿಧರ್ ಮಾಡೂರು, ಮೋಹನ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:
ಶಾಲೆಯ ಅಭಿವೃದ್ಧಿಯಲ್ಲಿ ಸ್ಥಳೀಯರು, ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಭಿಮಾನಿಗಳ ಸಹಕಾರವನ್ನು ಮತ್ತಷ್ಟು ಸಂಘಟಿಸಿ, ಸರ್ಕಾರಿ ಶಾಲೆಯೊಂದನ್ನು ಸಮಗ್ರವಾಗಿ ಬೆಳೆಸುವ ಪ್ರಯತ್ನಕ್ಕೆ ಟ್ರಸ್ಟ್ ಈ ಮುಂದಾಗಿದ್ದು, ಕರಾವಳಿಯಲ್ಲಿ ಗಮನಸೆಳೆಯುತ್ತಿದೆ.



