ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚ ಭೂತಗಳ ಮೇಲೆ ನಾವೂ ನಿಯಂತ್ರಣವನ್ನು ಸಾಧಿಸಬಹುದು. ಪ್ರಕೃತಿ ನಮಗೆ ಕೊಟ್ಟದ್ದನ್ನು ಕಾಲ ಹಾಗೂ ದೇಶಕ್ಕೆ ತಕ್ಕಂತೆ ಮತ್ತು ಶಾಸ್ತ್ರ ನಿಯಮದಂತೆ ಆಹಾರವನ್ನು ಸೇವಿಸಿದರೆ ಹಾಗೂ ನಿಯಮ ಬದ್ಧವಾದ ಉಪವಾಸದಿಂದ ಸಾಮಾನ್ಯನೂ ಕೂಡ ಅಗ್ನಿಜಯವನ್ನು ಸಾಧಿಸಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯ ಶುಕ್ರವಾರದ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮಹಾನ್ ವ್ಯಕ್ತಿಗಳ ಜೀವನದಲ್ಲಿಯೂ ಕಷ್ಟಗಳು ಬರುತ್ತವೆ ಎಂದ ಶ್ರೀಗಳು, ನಳ – ದಮಯಂತಿಯ ಚರಿತ್ರೆಯ ಮೂಲಕ ನಳನಿಗೆ ಅಗ್ನಿಯ ಮೇಲಿದ್ದ ಪ್ರಭಾವ ಹಾಗೂ ಬಲವನ್ನು ವಿವರಿಸಿ, ನಳನು ಸಂಕಷ್ಟಗಳ ಸರಮಾಲೆಯ ಮಧ್ಯದಲ್ಲಿದ್ದಾಗ ಆತನ ಮಹತ್ವ ಮತ್ತು ಸಾಮರ್ಥ್ಯ ಜಗತ್ತಿನ ಮುಂದೆ ಪ್ರಕಟವಾಯಿತು. ಪಂಚಭೂತಗಳ ಮೇಲೆ ನಳನು ಸಾಧಿಸಿಕೊಂಡಿದ್ದ ನಿಯಂತ್ರಣದಿಂದ ಇದು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ತೇಗು ಬಂದ ನಂತರ ಊಟವನ್ನು ನಿಲ್ಲಿಸಬೇಕು ಎನ್ನಲಾಗಿದೆ. ಆದರೆ ಆ ಸಮಯದಲ್ಲಿ ಎಲೆಯ ಮೇಲೆ ಉಳಿದಿರುವ ಆಹಾರವನ್ನು ಹಾಗೆಯೇ ಬಿಡಬೇಕೇ? ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ಎಲೆಗೆ ಹಾಕಿಸಿಕೊಳ್ಳಬಾರದು. ಬಡಿಸುವವರಿಗೂ ಈ ಬಗ್ಗೆ ಅರಿವು ಅಗತ್ಯ. ಬಾಳೆ ಎಲೆಯಲ್ಲಿ ಊಟವನ್ನು ಬಿಟ್ಟರೆ ಅದು ವ್ಯರ್ಥ. ಆದರೆ ಹೆಚ್ಚಾದ ಆಹಾರವನ್ನು ನಾವು ಸೇವಿಸಿದರೆ ಅದು ಅನರ್ಥಕ್ಕೆ ಕಾರಣ. ಒಂದೊಮ್ಮೆ ಎಲೆಯಲ್ಲಿ ಆಹಾರವನ್ನು ವ್ಯರ್ಥ ಮಾಡಿದರೆ ಅದು ನಿಜವಾಗಿ ವ್ಯರ್ಥವಲ್ಲ. ಅದು ಬೇರೆ ಯಾವುದೋ ಜೀವಿಯ ಪಾಲಿಗೆ ಆಹಾರವಾಗುತ್ತದೆ ಎಂದು ತಿಳಿಸಿದರು.
ಜೀವನದಲ್ಲಿ ಆರೋಗ್ಯ, ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಬೇಕಾದರೆ ಆಹಾರದ ಬಗ್ಗೆ ಜವಾಬ್ದಾರಿ ಇರಬೇಕು, ಜಠರಾಗ್ನಿಯನ್ನು ಕಾಪಾಡಬೇಕು ಮತ್ತು ಅನ್ನವನ್ನು ದೇವಸ್ವರೂಪವೆಂದು ಭಾವಿಸಿ ಗೌರವಿಸಬೇಕು ಎಂದು ಸಮಾಜಕ್ಕೆ ಕರೆನೀಡಿದರು.
ಶ್ರೀ ಕ್ಷೇತ್ರ ಹಟ್ಟಿಯಂಗಡಿಯ ಧರ್ಮದರ್ಶಿಗಳಾದ ವೇ.ಮೂ. ಬಾಲಚಂದ್ರ ಭಟ್ಟ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ಜೆ.ಡಿ.ಎಸ್ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಶೇಖರ ನಾಯ್ಕ ಶ್ರೀಗಳ ಆಶೀರ್ವಾದ ಪಡೆದರು. ಮಂಜುನಾಥ ಸುವರ್ಣಗದ್ದೆ, ಶಾಂತಾರಾಮ ಹೆಗಡೆ ಕೊಂಡದಕುಳಿ, ದಿನಪ್ರಧಾನರಾಗಿ ಆರ್.ಎಸ್. ಹೆಗಡೆ ಹರಗಿ ದಂಪತಿಗಳು ಉಪಸ್ಥಿತರಿದ್ದರು.



