October 9, 2026
Friday, October 9, 2026
spot_img

ಬದುಕಿ ಬಾಳಬೇಕಿದ್ದ ಯುವತಿ ಆತ್ಮ*ಹತ್ಯೆಗೆ ಶರಣು: ಸಾವಿಗೆ ಬಾಯ್‌ಫ್ರೆಂಡ್‌ ಕಾರಣ ಎಂದ ಕುಟುಂಬ

ಹೊಸದಿಗಂತ ವರದಿ ಹಾಸನ :

ಚನ್ನರಾಯಪಟ್ಟಣ ಪಟ್ಟಣದ ಅಂಬಿಕನಗರದಲ್ಲಿ ವಾಸವಿದ್ದ ಸುಮಾರು 19 ವರ್ಷದ ಬಿ.ಎ ವಿದ್ಯಾರ್ಥಿನಿ ರಚಿತಾ (ಹೆಸರು ಬದಲಿಸಲಾಗಿದೆ) ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ರಚಿತಾ ಪಟ್ಟಣದ ಬಾಗೂರು ರಸ್ತೆಗೆ ಹೊಂದಿಕೊಂಡಿರುವ ರೇಣುಕಾಂಬ ರಸ್ತೆಯಲ್ಲಿನ ಐಡಿಯಲ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಎಂಬ ಯುವಕನನ್ನು ಸುಮಾರು ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇದೇ ಬೇಕರಿಯಲ್ಲಿ ಯುವತಿಯ ತಾಯಿಯೂ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಆತನೇ ಮಗಳನ್ನು ಕೊಂದಿದ್ದು!

ಯುವತಿಯ ಪೋಷಕರ ಆರೋಪದ ಪ್ರಕಾರ, ಘಟನೆ ನಡೆದ ದಿನ ನವೀನ್ ಯುವತಿಯ ಮನೆಗೆ ತೆರಳಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ಬಳಿಕ ಹಲ್ಲೆ ಮಾಡಿ ನೇಣು ಹಾಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸಿ ಸತ್ಯಾ ಸತ್ಯತೆಯನ್ನು ಬಹಿರಂಗಪಡಿಸಬೇಕಿದೆ.

ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಪಟ್ಟಣ ಪೊಲೀಸ್ ಠಾಣೆ ಮುಂಭಾಗದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಯುವತಿಯ ಸಾವಿನ ಕುರಿತು ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Must Read