August 22, 2026
Saturday, August 22, 2026
spot_img

ಅಳೋದಕ್ಕೆ ನಾವೇನು ಹೆಣ್ಣುಮಕ್ಕಳಾ! ಕಣ್ಣೀರು ಹಾಕೋದಕ್ಕೆ ಗಂಡಸರು ಹಿಂಜರಿಯೋದು ಯಾಕೆ?

ಏನಿಲ್ಲಾ ಎಂದರೂ ಅವನಿಗೆ ಐದು ವರ್ಷ ವಯಸ್ಸು. ಶಾಲೆಯಲ್ಲಿ ಹುಡುಗಿಯೊಬ್ಬಳು ಅವನ ಟಿಫನ್‌ ಬಾಕ್ಸ್‌ ಕಿತ್ತುಕೊಂಡು ತಿಂದು ದೊಡ್ಡದಾಗಿ ಕಣ್ಣುಬಿಟ್ಟಿದ್ದಾಳೆ. ಮನೆಗೆ ಬಂದವನೇ ನಾಳೆಯಿಂದ ನಾನು ಶಾಲೆಗೆ ಹೋಗೋದಿಲ್ಲ ಎಂದು ಬಾಯಿ ತೆರದು ಜೋರಾಗಿ ಅತ್ತಿದ್ದಾನೆ. ಅಮ್ಮ ಮುದ್ದು ಮಾಡುತ್ತಾ ಏನಾಯ್ತು ಮಗು ಎಂದು ಕೇಳುವ ಪ್ರಯತ್ನ ಮಾಡುವಾಗಲೇ ಮಲಗಿದ್ದ ತಾತ, ʼಅದೇನೋ ಹೆಣ್ಮಕ್ಕಳ ಥರ ಅಷ್ಟು ಜೋರಾಗಿ ಅಳ್ಕೊಂಡು ಕೂತಿದಿಯಾ?ʼ ಎನ್ನುತ್ತಾರೆ. ಇದೊಂದು ಸಣ್ಣ ಉದಾಹರಣೆ ಅಷ್ಟೆ..

ಗಂಡುಮಕ್ಕಳು ಸಣ್ಣ ಪುಟ್ಟ ಕಾರಣಗಳಿಗೆ ಅತ್ತರೆ, ನೀನೇನೂ ಹುಡುಗೀನಾ? ಹೆಣ್ಮಕ್ಕಳ ಹಾಗೆ ಅಳಬಾರದು ಮಗು ಎಂದು ಹೇಳೋದನ್ನ ಸಾಮಾನ್ಯವಾಗಿ ಕೇಳಿಯೇ ಇರ್ತೀರಿ. ಆದರೆ ಇದೀಗ ನಿಧಾನಕ್ಕೆ ಸಮಯ ಬದಲಾಗುತ್ತಿದ್ದು, ಕಣ್ಣೀರಿಗೆ ಜೆಂಡರ್‌ ಇಲ್ಲ ಅನ್ನೋದು ಅರ್ಥವಾಗುತ್ತಿದೆ. ಈಗ ತಾಯಿಯಾಗಿರುವ ಮಿಲೇನಿಯಲ್‌ ಹಾಗೂ ಜೆನ್‌ ಝಿ ಹೆಣ್ಣುಮಕ್ಕಳು ತಮ್ಮ ಮಕ್ಕಳಿಗೆ ʼನೋವಾದಾಗ ಎಲ್ಲರೂ ಅಳಬಹುದು, ಕಣ್ಣೀರು ಹೆಣ್ಣಿಗೆ ಸ್ವಂತದ್ದಲ್ಲʼ ಅನ್ನೋದನ್ನು ಅರ್ಥ ಮಾಡಿಸುತ್ತಿದ್ದಾರೆ.

ಆದರೆ ಈಗಲೂ ಅದೆಷ್ಟೋ ಪುರುಷರು ಸಾಯುವಷ್ಟು ನೋವಾಗಿದ್ದರೂ ತಮ್ಮ ಕಣ್ಣೀರನ್ನು ಕಂಟ್ರೋಲ್‌ ಮಾಡಿಕೊಳ್ಳುತ್ತಾರೆ. ಅಳುವುದು ವೀಕ್‌ನೆಸ್‌ ಅಥವಾ ಅಳು ನಮಗಲ್ಲ ಎಂದು ಭಾವನೆ ಅವರ ಮನಸ್ಸಿನ ಆಳದಲ್ಲಿ ಹೊಕ್ಕುಬಿಟ್ಟಿದೆ.

ಗಂಡಸರು ಅಳದೇ ಇರೋದಕ್ಕೆ ಕಾರಣಗಳಿವು..

ಗೊತ್ತಿದ್ದೋ ಗೊತ್ತಿಲ್ಲದೆಯೋ ಸಮಾಜ ಅಳೋದು ತಪ್ಪು ಎಂದು ಹೇಳಿಕೊಟ್ಟಿದೆ. ಅಳುವ ವ್ಯಕ್ತಿಯನ್ನು ಹೆಣ್ಣಿಗೆ ಹೋಲಿಸಿ ಅಪಹಾಸ್ಯ ಮಾಡೋದು ʼನಾರ್ಮಲ್‌ʼ ಎನ್ನುವಂತೆ ಆಗಿಬಿಟ್ಟಿದೆ. ಈ ಕಾರಣಕ್ಕೆ ಜನರಿರುವ ಕಡೆ ಗಂಡಸರು ಒಂದು ಹನಿ ಕಣ್ಣೀರು ಕೂಡ ಕಣ್ಣಿಂದ ಕೆಳಗಿಳಿಯೋದಕ್ಕೆ ಪರ್ಮಿಷನ್‌ ಕೊಡೋದಿಲ್ಲ.

ಗಂಡಸರು ಸ್ಟ್ರಾಂಗ್‌, ಗಂಡಸಿಗೆ ನೋವಾಗೋದಿಲ್ಲ, ಗಂಡಸರು ಎಷ್ಟೇ ಕಷ್ಟ ಬಂದರೂ ಸಹಿಸಿಕೊಳ್ಳಬೇಕು ಅದನ್ನು ಬಿಟ್ಟು ಕಷ್ಟ ಬಂದ ತಕ್ಷಣ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತು ಅಳಬಾರದು ಎನ್ನುವುದನ್ನು ಮೆದುಳಿಗೆ ಫೀಡ್‌ ಮಾಡಲಾಗಿದೆ. ಹೀಗಾಗಿ ಕಣ್ಣೀರನ್ನು ತಡೆದುಕೊಳ್ಳುವುದು ಗಂಡಸಿಗೆ ನಾರ್ಮಲ್‌ ಎನಿಸುತ್ತದೆ.

ಇಡೀ ಸಮಾಜನ ಗಂಡಸನ್ನು ಸಮಸ್ಯೆ ಎಂದು ಪರಿಗಣಿಸುವುದಿಲ್ಲ. ಬದಲಾಗಿ ಪರಿಹಾರ ಎಂದು ಪರಿಗಣಿಸುತ್ತದೆ. ಸಮಸ್ಯೆ ಬಂದ ತಕ್ಷಣ ಯುದ್ಧಕ್ಕೆ ಹೊರಟ ಸೈನಿಕನಂತೆ ಹೋರಾಡಬೇಕು ಅನ್ನೋದು ವಾಡಿಕೆ. ಇಲ್ಲಿ ಕಣ್ಣೀರಿಗೆ ಜಾಗವೂ ಇಲ್ಲ, ಸಮಯವೂ ಇಲ್ಲ.

ಇಷ್ಟೇ ಅಲ್ಲದೆ ಗಂಡಸರಲ್ಲಿ ಟೆಸ್ಟೊಸ್ಟರಾನ್‌ ಹಾರ್ಮೋನ್‌ ಹೆಚ್ಚಿರುತ್ತದೆ. ಹೀಗಾಗಿ ನೈಸರ್ಗಿಕವಾಗಿಯೇ ಅವರಿಗೆ ಅಳು ಕಡಿಮೆ. ಇದರ ಜೊತೆಗೆ ಅಳು ಬರುವ ಸಂದರ್ಭದಲ್ಲಿ ಗಂಡಸರು ಎದ್ದು ಹೋಗೋದು, ಮೌನವಾಗಿರೋದು ಅಥವಾ ಕೆಲಸಗಳಲ್ಲಿ ಬ್ಯುಸಿಯಾಗಿರೋದನ್ನು ರೂಢಿ ಮಾಡಿಕೊಂಡಿದ್ದಾರೆ.

ಅಳು ಕಂಟ್ರೋಲ್‌ ಮಾಡಿದರೆ ದೇಹಕ್ಕೆ ನಾನಾ ತೊಂದರೆ

ಅಳು ಬಂದಾಗ ಅತ್ತುಬಿಡಿ. ಜನರ ಮುಂದೆ ಅಳೋಕೆ ಕಷ್ಟವಾ? ಒಬ್ಬರೇ ಇರುವ ಜಾಗಕ್ಕೆ ಬಂದು ಮನಸ್ಸನ್ನು ಹಗುರ ಮಾಡಿಕೊಳ್ಳಿ. ಅದನ್ನು ಬಿಟ್ಟು ಭಾವನೆಗಳನ್ನು ಅದುಮಿಟ್ಟುಕೊಂಡರೆ ಅದು ಒತ್ತಡವಾಗಿ ಬದಲಾಗುತ್ತದೆ. ಆ ನೋವು ನಿಮ್ಮ ದೇಹದಲ್ಲೇ ಉಳಿದುಬಿಡುತ್ತದೆ. ಮುಂದೊಂದು ದಿನ ತಾನೇನು ಅನ್ನೋದನ್ನು ತೋರಿಸಿಬಿಡುತ್ತದೆ. ದೀರ್ಘಸಮಯದವರೆಗೂ ಅಳುವುದನ್ನು ಕಂಟ್ರೋಲ್‌ ಮಾಡುವವರಲ್ಲಿ ಒತ್ತಡ, ಆಂಕ್ಸೈಟಿ, ತಲೆನೋವು, ಮಸಲ್‌ಗಳಲ್ಲಿ ನೋವು ಕಾಣಿಸುತ್ತದೆ. ನಿಮ್ಮ ದೇಹದಲ್ಲಿ ಸ್ಟ್ರೆಸ್‌ ಹಾರ್ಮೋನ್‌ ಆಗಿರುವ ಕಾರ್ಟಿಸೋಲ್‌ ಹೆಚ್ಚಾಗುತ್ತದೆ. ಅತ್ತು ಹಗುರಾಗುವ ಫೀಲಿಂಗ್‌ನ್ನು ನೀವು ಮಿಸ್‌ ಮಾಡಿಕೊಳ್ತೀರಿ.

ಈಗಿನ ಜನರೇಷನ್‌ ತಮ್ಮ ಭಾವನೆಗಳನ್ನು ಹೆಚ್ಚಾಗಿಯೇ ಎಕ್ಸ್‌ಪ್ರೆಸ್‌ ಮಾಡುವುದನ್ನು ಆರಂಭಿಸಿದೆ. ಅಳುವ ಗಂಡಸರನ್ನು ವೀಕ್‌ ಎಂದು ನೋಡದೇ ಭಾವನೆಗಳಿಗೆ ಸ್ಪಂದಿಸುವ, ಭಾವನಾತ್ಮಕ ವ್ಯಕ್ತಿಯೆಂದು ಹೆಣ್ಣುಮಕ್ಕಳು ಪರಿಗಣಿಸುತ್ತಾರೆ. ತಮ್ಮ ಫೀಲಿಂಗ್ಸ್‌ ತೋರಿಸಿಕೊಳ್ಳೋದರಲ್ಲಿ ಸ್ವಲ್ಪವೂ ಹಿಂಜರಿಯದ ಹುಡುಗರೇ ಹುಡುಗಿಯರಿಗೆ ಇಷ್ಟವಾಗ್ತಾರಂತೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !