August 22, 2026
Saturday, August 22, 2026
spot_img

ಸತತ 26 ಪಂದ್ಯ ಗೆದ್ದಿದ್ದ ಸ್ಪೇನ್‌ಗೆ ಶಾಕ್: 57 ರನ್‌ಗಳಿಂದ ಗೆದ್ದು ಬೀಗಿದ ಪೋರ್ಚುಗಲ್ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಜಗತ್ತಿನಲ್ಲಿ ಪೋರ್ಚುಗಲ್ ಪುರುಷರ ಕ್ರಿಕೆಟ್ ತಂಡ ಹೊಸ ಇತಿಹಾಸ ಬರೆದಿದೆ. ಫಿನ್‌ಲ್ಯಾಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಯುರೋಪ್ ಸಬ್-ರೀಜನಲ್ ‘ಸಿ’ ಕ್ವಾಲಿಫೈಯರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಬಲಶಾಲಿ ಸ್ಪೇನ್ ಪಡೆಯನ್ನು 57 ರನ್‌ಗಳಿಂದ ಧೂಳೀಪಟ ಮಾಡಿದೆ. ಸತತ 26 ಪಂದ್ಯಗಳನ್ನು ಗೆದ್ದು ಜಾಗತಿಕ ದಾಖಲೆ ಬರೆದಿದ್ದ ಸ್ಪೇನ್‌ನ ಗೆಲುವಿನ ಸವಾರಿಗೆ ಬ್ರೇಕ್ ಹಾಕಿದ ಪೋರ್ಚುಗಲ್, 2027ರ ಯುರೋಪ್ ಕ್ವಾಲಿಫೈಯರ್‌ಗೆ ಅದ್ಧೂರಿಯಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ.

ಬ್ಯಾಟಿಂಗ್‌ನಲ್ಲಿ ಸವಾಲಿನ ಮೊತ್ತ

ಟಾಸ್ ಸೋತರೂ ಧೃತಿಗೆಡದೆ ಮೊದಲು ಬ್ಯಾಟಿಂಗ್‌ಗಿಳಿದ ಪೋರ್ಚುಗಲ್, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 160 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಕ್ರಿಸ್ಟೋಫರ್ ಡಿ ಫ್ರೀಟಾಸ್ (39 ರನ್), ಕ್ರೇಗ್ ಕ್ಯಾಚೋಪಾ 25 ರನ್) ಮತ್ತು ಧವಳ್‌ಕುಮಾರ್ ನರೋಟಮ್ (23 ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ತಂಡಕ್ಕೆ ಬಲ ತುಂಬಿತು.

ಮಾರಕ ಬೌಲಿಂಗ್ ದಾಳಿಗೆ ನಲುಗಿದ ಸ್ಪೇನ್

161 ರನ್‌ಗಳ ಗುರಿ ಬೆನ್ನಟ್ಟಿದ ಸ್ಪೇನ್ ತಂಡಕ್ಕೆ ಪೋರ್ಚುಗಲ್ ಬೌಲರ್‌ಗಳು ಕಂಟಕರಾದರು. ಎಡ್ವರ್ಡ್ ಫ್ಲೆಮಿಂಗ್ ಕೇವಲ 13 ರನ್ ನೀಡಿ 3 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಸಿರಾಜ್ ಉಲ್ಲಾ ಖಾದೆಮ್ 19 ರನ್‌ಗಳಿಗೆ 2 ವಿಕೆಟ್ ಪಡೆದು ಸಾಥ್ ನೀಡಿದರು. ಬೌಲರ್‌ಗಳ ಸಂಘಟಿತ ದಾಳಿಗೆ ಸ್ಪೇನ್ ಕೇವಲ 103 ರನ್‌ಗಳಿಗೆ ಆಲೌಟ್ ಆಯಿತು.

ವಿಶ್ವಕಪ್ ಕನಸು ಇನ್ನಷ್ಟು ಹತ್ತಿರ!

ಈ ಅದ್ಭುತ ಗೆಲುವಿನೊಂದಿಗೆ 2028ರ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಆತಿಥ್ಯದ ಟಿ೨೦ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ಹಾದಿಯಲ್ಲಿ ಪೋರ್ಚುಗಲ್ ಪ್ರಮುಖ ಹೆಜ್ಜೆ ಇಟ್ಟಿದೆ. ಮುಂದಿನ ಹಂತದಲ್ಲಿ ಸ್ಕಾಟ್‌ಲ್ಯಾಂಡ್, ಜರ್ಸಿ ಮತ್ತು ಡೆನ್ಮಾರ್ಕ್ ತಂಡಗಳನ್ನು ಎದುರಿಸಲಿದ್ದು, ಅಗ್ರ ಸ್ಥಾನ ಪಡೆದರೆ ಗ್ಲೋಬಲ್ ಕ್ವಾಲಿಫೈಯರ್ ತಲುಪಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !