ಹೊಸದಿಗಂತ ಡಿಜಿಟಲ್ ಡೆಸ್ಕ್:
‘ತಾಯಮಾಮನ್ ತಂಗ ಮೊದಿರಂ ತಿಟ್ಟಂ’ ಯೋಜನೆಯಡಿ ತಮಿಳುನಾಡು ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ ಒಂದು ಗ್ರಾಂ ತೂಕದ 22 ಕ್ಯಾರೆಟ್ ನ ಉಚಿತ ಚಿನ್ನದ ಉಂಗುರ ನೀಡುವ ಸಿದ್ಧತೆ ನಡೆಸಿದೆ.
ಈ ಯೋಜನೆಯಡಿ ಮೊದಲ ಹಂತದಲ್ಲಿ 1,28,499 ಚಿನ್ನದ ಉಂಗುರಗಳನ್ನು ಖರೀದಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಷ್ಟು ಚಿನ್ನದ ಉಂಗುರಗಳ ಅಂದಾಜು ವೆಚ್ಚ ಬರೋಬ್ಬರಿ 220 ಕೋಟಿ ರೂ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಂಗುರ ಮಾಡೋ ಹೊಣೆ ಯಾರ ಮೇಲಿದೆ?
ಅಗತ್ಯವಿರುವ ಉಂಗುರಗಳ ಪೂರೈಕೆಗಾಗಿ ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮವು ಎರಡು ಪ್ರಮುಖ ಆಭರಣ ಸಂಸ್ಥೆಗಳಿಗೆ ಕಾರ್ಯಾದೇಶ ನೀಡಿದೆ. ಜಾಯ್ ಅಲುಕ್ಕಾಸ್‌ಗೆ ಶೇ.70 ಹಾಗೂ ಕಲ್ಯಾಣ್ ಜ್ಯುವೆಲ್ಲರ್ಸ್‌ಗೆ ಶೇ.30ರ ಪ್ರಮಾಣದಲ್ಲಿ ಪೂರೈಕೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಒಟ್ಟು 1,28,499 ಉಂಗುರಗಳನ್ನು ಪೂರೈಸಬೇಕಿದೆ.
ಯೋಜನೆ ಜಾರಿಯಾಗೋದು ಯಾವಾಗಿಂದ?
ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಯೋಜನೆಗೆ ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿರುವ ಅರ್ಹ ಮಕ್ಕಳಿಗೆ ಮೊದಲ ಹಂತದಲ್ಲಿ ಉಂಗುರಗಳನ್ನು ವಿತರಿಸಲಾಗುತ್ತದೆ.
ಇದನ್ನೂ ಓದಿ:
ಈ ಉಂಗುರದ ವಿಶೇಷತೆ ನೋಡಿ
ಉಂಗುರದಲ್ಲಿ ತಮಿಳುನಾಡು ಸರ್ಕಾರದ ಅಧಿಕೃತ ಲಾಂಛನ ಹಾಗೂ ಮುಖ್ಯಮಂತ್ರಿ ಅವರ ಚಿತ್ರವನ್ನು ಅಚ್ಚು ಹಾಕುವ ನಿಯಮವಿದೆ ಎಂದು ಸರ್ಕಾರ ತಿಳಿಸಿದೆ.
ಟೆಂಡರ್‌ಗೆ 11 ಕಂಪನಿಗಳ ಸ್ಪರ್ಧೆ
ಉಂಗುರಗಳ ಪೂರೈಕೆಗಾಗಿ ಸರ್ಕಾರ ಒಟ್ಟು 4,41,667 ಉಂಗುರಗಳಿಗೆ ಟೆಂಡರ್ ಆಹ್ವಾನಿಸಿತ್ತು. ಜುಲೈ 14ರಂದು ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ 11 ಕಂಪನಿಗಳು ಭಾಗವಹಿಸಿದ್ದವು. ಸಂಸ್ಥೆಗಳು ತಮಿಳುನಾಡು ಟೆಂಡರ್ಸ್ ಪೋರ್ಟಲ್ ಮೂಲಕ ತಮ್ಮ ದರಗಳನ್ನು ಸಲ್ಲಿಸಿದ್ದವು.
ಟೆಂಡರ್‌ನಲ್ಲಿ ಜಾಯ್ ಅಲುಕ್ಕಾಸ್ ಚಿನ್ನದ ಒಂದು ಗ್ರಾಂನ ಮೂಲ ಬೆಲೆಯನ್ನು ಹೊರತುಪಡಿಸಿ, ಸಂಸ್ಕರಣಾ ಶುಲ್ಕ, ವಿಮೆ, ಸಾಗಣೆ ಮತ್ತು ಬಿಐಎಸ್ ಮುದ್ರಣ ಸೇರಿದಂತೆ ಹೆಚ್ಚುವರಿ ವೆಚ್ಚಗಳಿಗೆ ಕೇವಲ 1 ಪೈಸೆಯ ಬಿಡ್ ಸಲ್ಲಿಸಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಕಲ್ಯಾಣ್ ಜ್ಯುವೆಲ್ಲರ್ಸ್ ಕೂಡ ಕಡಿಮೆ ದರದ ಬಿಡ್ ಸಲ್ಲಿಸಿತ್ತು.
ಮೊದಲ ಹಂತದಲ್ಲಿ ಇಷ್ಟೇ ಫಲಾನುಭವಿಗಳಿಗೆ ಸಿಗೋದು
ಒಟ್ಟು 4,41,667 ಉಂಗುರಗಳನ್ನು ಪೂರೈಸುವ ಯೋಜನೆಯಿದ್ದರೂ, ಆರಂಭಿಕ ಹಂತದಲ್ಲಿ ನಾಲ್ಕು ತಿಂಗಳ ಅವಧಿಗೆ ಅಗತ್ಯವಿರುವ 1,28,499 ಉಂಗುರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.



