October 12, 2026
Monday, October 12, 2026
spot_img

ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಗೆಲುವು: ಬೌಲರ್‌ಗಳ ಆತ್ಮವಿಶ್ವಾಸ ಕೊಂಡಾಡಿದ ಶ್ರೇಯಸ್ ಅಯ್ಯರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡವು 14 ರನ್‌ಗಳ ರೋಚಕ ಜ ಗೆಲುವು ದಾಖಲಿಸಿದೆ. ಈ ಗೆಲುವಿನ ಖುಷಿಯನ್ನು ಹಂಚಿಕೊಂಡಿರುವ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್, ಪಂದ್ಯದ ವೇಳೆ ಬೌಲರ್‌ಗಳು ತೋರಿದ ಆತ್ಮವಿಶ್ವಾಸ ಮತ್ತು ಬ್ಯಾಟರ್‌ಗಳ ಆಕ್ರಮಣಕಾರಿ ಆಟವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.

ಸಾಮಾನ್ಯವಾಗಿ ರಾತ್ರಿ ವೇಳೆ ಮೈದಾನದಲ್ಲಿ ಬೀಳುವ ಇಬ್ಬನಿಯಿಂದ ಒದ್ದೆಯಾದ ಚೆಂಡನ್ನು ಹಿಡಿದು ಬೌಲಿಂಗ್ ಮಾಡುವುದು ಬೌಲರ್‌ಗಳಿಗೂ ತಲೆನೋವಾಗಿ ಪರಿಣಮಿಸುತ್ತದೆ. ಈ ಕುರಿತು ಮಾತನಾಡಿದ ಅಯ್ಯರ್, ಒಣ ಚೆಂಡು ಸಿಕ್ಕಿದ್ದರಿಂದ ಬೌಲರ್‌ಗಳಿಗೆ ಸ್ಪಷ್ಟತೆ ಇತ್ತು ಎಂದಿದ್ದಾರೆ.

“ನಾನು ಬೌಲರ್‌ಗಳೊಂದಿಗೆ ಮಾತನಾಡಿದಾಗ ಏನು ಮಾಡಬೇಕೆಂಬ ಬಗ್ಗೆ ಕಂಪ್ಲೀಟ್ ಕ್ಲಾರಿಟಿ ಹೊಂದಿದ್ದರು. ಪ್ರತಿಯೊಬ್ಬ ಬೌಲರ್ ಕೂಡ ಸವಾಲನ್ನು ಸ್ವೀಕರಿಸಲು ಸಿದ್ಧರಾಗಿದ್ದರು. ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಇಲ್ಲದಿದ್ದದ್ದು ಟೀಮ್ ಇಂಡಿಯಾ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು” ಎಂದು ಅಯ್ಯರ್ ಖುಷಿ ವ್ಯಕ್ತಪಡಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 223 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಆರಂಭಿಕ ಆಟಗಾರರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ. ಪವರ್‌ಪ್ಲೇನಲ್ಲಿ ಅಭಿಷೇಕ್ ಶರ್ಮಾ ಆಡಿದ ಬಿರುಸಿನ ಬ್ಯಾಟಿಂಗ್ ತಂಡಕ್ಕೆ ಅದ್ಭುತ ಆರಂಭ ತಂದುಕೊಟ್ಟಿತು. ಇದರ ಬೆನ್ನಲ್ಲೇ ಇಶಾನ್ ಕಿಶನ್ ಕೂಡ ವೆಸ್ಟ್ ಇಂಡೀಸ್ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಕಳೆದ ಕೆಲವು ತಿಂಗಳುಗಳಿಂದ ಇಶಾನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ನಾಯಕ ಬ್ಯಾಟರ್‌ಗಳನ್ನು ಶ್ಲಾಘಿಸಿದರು. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಬಿದ್ದರೂ ರನ್ ವೇಗ ತಗ್ಗದಂತೆ ಎಚ್ಚರಿಕೆ ವಹಿಸಲಾಯಿತು ಎಂದರು.

ವೆಸ್ಟ್ ಇಂಡೀಸ್ ತಂಡವು ಕೇವಲ 14 ರನ್‌ಗಳ ಅಂತರದಿಂದ ಸೋತಿದ್ದರೂ, ಆ ತಂಡದಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಹಲವು ಆಟಗಾರರಿದ್ದಾರೆ. ಈ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್, “ವಿಂಡೀಸ್ ತಂಡದಲ್ಲಿ ಮ್ಯಾಚ್ ವಿನ್ನರ್‌ಗಳಿದ್ದಾರೆ. ಆದ್ದರಿಂದ ನಾವು ಯಾವುದೇ ಹಂತದಲ್ಲೂ ಮೈಮರೆಯುವಂತಿಲ್ಲ, ಸದಾ ಪಾಸಿಟಿವ್ ಆಗಿ ಇರಬೇಕಾಗುತ್ತದೆ” ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.

ಸರಣಿಯ ಮುಂದಿನ ಪಂದ್ಯಗಳು ಹೈದರಾಬಾದ್ ಮತ್ತು ಬೆಂಗಳೂರು ಮೈದಾನಗಳಲ್ಲಿ ನಡೆಯಲಿದ್ದು, ಇವೆರಡೂ ಹೆಚ್ಚು ರನ್ ಬರುವ ಪಿಚ್‌ಗಳಾಗಿವೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಅಯ್ಯರ್, ಮೈದಾನ ಯಾವುದೇ ಇರಲಿ ತಂಡವು ತನ್ನ ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಲಿದೆ ಎಂದಿದ್ದಾರೆ. ಮುಂಬರುವ ಪಂದ್ಯಗಳಲ್ಲೂ ಭಾರತ ತಂಡವು ಇದೇ ರೀತಿಯ ಉನ್ನತ ಮಟ್ಟದ ಆಕ್ರಮಣಕಾರಿ ಮನೋಭಾವದೊಂದಿಗೆ ಕಣಕ್ಕಿಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read