ಹೊಸದಿಗಂತ ವರದಿ ಚಿತ್ರದುರ್ಗ:
ಉದ್ಯಮಶೀಲತೆಯ ಹಾದಿಯಲ್ಲಿ ಸಾಗುವ ಪ್ರತಿಯೊಬ್ಬ ಉದ್ಯಮಿಯೂ ಆರ್ಥಿಕ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬ್ಯಾಂಕಿಂಗ್ ವ್ಯವಸ್ಥೆಯ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಸ್ವಂತ ಉದ್ಯೋಗ ಸ್ಥಾಪಿಸುವುದರ ಜತೆಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ಪಿ. ಪ್ರವೀಣ್ ಸಲಹೆ ನೀಡಿದರು.
ಇಲ್ಲಿನ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಶುಕ್ರವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಧಾರವಾಡದ ಸಿಡಾಕ್ ಮತ್ತು ಚಿತ್ರದುರ್ಗ ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ 10 ದಿನಗಳ ʼಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭʼದಲ್ಲಿ ಮಾತನಾಡಿದ ಅವರು, ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆಯುವ ವಿವಿಧ ಹಂತಗಳ ಬಗ್ಗೆ ಸುದೀರ್ಘ ಮಾಹಿತಿ ನೀಡಿ, ನೂತನವಾಗಿ ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳನ್ನು ಅಭಿನಂದಿಸಿದರು. ಉದ್ಯಮ ಆರಂಭಿಸುವ ಹಂತದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಹಲವು ಪ್ರಾಯೋಗಿಕ ಸಲಹೆಗಳನ್ನು ಹಂಚಿಕೊಂಡರು.
ಇದನ್ನೂ ಓದಿ:
ಚಿತ್ರದುರ್ಗ ಸಿಡಾಕ್ ಉಪನಿರ್ದೇಶಕ ಶಿವಾನಂದ ಯಲಿಗಾರ್ ಮಾತನಾಡಿ, ಸ್ವಂತ ಉದ್ಯೋಗ ಪ್ರಾರಂಭಿಸುವವರು ಕೇವಲ ಸ್ವಯಂ ಉದ್ಯೋಗಿಗಳಾಗದೆ ಮತ್ತಷ್ಟು ಜನರಿಗೆ ಕೆಲಸ ನೀಡುವ ಉದ್ಯೋಗದಾತರಾಗುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ಉದ್ಯಮಶೀಲತೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧೀಕ್ಷಕ ರಮೇಶ್ ಇದ್ದರು. ಶಿಬಿರಾರ್ಥಿಗಳಾದ ಪವಿತ್ರ ಪ್ರಾರ್ಥಿಸಿದರು. ತಿಪ್ಪೇಸ್ವಾಮಿ ಸ್ವಾಗತಿಸಿದರು. ಮಾರುತಿ ವಂದಿಸಿದರು. ಸಿಡಾಕ್ ತರಬೇತುದಾರ ಪಿ. ವಿಜಯ ಕುಮಾರ ಕಾರ್ಯಕ್ರಮ ನಿರೂಪಿಸಿದರು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 31 ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.



