August 22, 2026
Saturday, August 22, 2026
spot_img

ಚಿನ್ನದ ಕನಸು ನುಚ್ಚುನೂರಾದರೂ ಕಂಚಿನಲ್ಲಿ ಮಿಂಚಿದ ತ್ರಿಶಾ-ಗಾಯತ್ರಿ: 15 ವರ್ಷಗಳ ಬಳಿಕ ಭಾರತಕ್ಕೆ ಪದಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮಹಿಳಾ ಬ್ಯಾಡ್ಮಿಂಟನ್‌ಗೆ ಮತ್ತೊಂದು ಮಹತ್ವದ ದಿನಕ್ಕೆ 2026ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸಾಕ್ಷಿಯಾಗಿದೆ.

ದೆಹಲಿಯ ಇಂದಿರಾ ಗಾಂಧಿ ಅರೆನಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತದ ತ್ರಿಶಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ ಜೋಡಿ ಸೆಮಿಫೈನಲ್‌ನಲ್ಲಿ ಸೋಲು ಕಂಡರೂ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದು ಹೊಸ ದಾಖಲೆ ನಿರ್ಮಿಸಿದೆ. 15 ವರ್ಷಗಳ ಬಳಿಕ ಭಾರತದ ಮಹಿಳಾ ಡಬಲ್ಸ್ ವಿಭಾಗಕ್ಕೆ ವಿಶ್ವ ಚಾಂಪಿಯನ್‌ಶಿಪ್ ಪದಕ ಒಲಿದಿದೆ.

ಸೆಮಿಫೈನಲ್‌ನಲ್ಲಿ ಚೀನಾದ ಜೋಡಿಯ ಎದುರು ಹೋರಾಟ

ಸೆಮಿಫೈನಲ್‌ನಲ್ಲಿ ತ್ರಿಶಾ-ಗಾಯತ್ರಿ ಎದುರಿಸಿದ್ದು ವಿಶ್ವದ ನಂ.1 ಶ್ರೇಯಾಂಕದ ಚೀನಾದ ಲಿಯು ಶೆಂಗ್ ಶು ಮತ್ತು ಟ್ಯಾನ್ ನಿಂಗ್ ಜೋಡಿಯನ್ನು. ಆರಂಭಿಕ ಗೇಮ್‌ನಲ್ಲಿ ಭಾರತೀಯ ಆಟಗಾರ್ತಿಯರು ಅದ್ಭುತ ಪ್ರದರ್ಶನ ನೀಡಿ 21-18 ಅಂತರದಲ್ಲಿ ಗೆಲುವು ಸಾಧಿಸಿದರು. ಇದರಿಂದ ಪಂದ್ಯದಲ್ಲಿ ಭಾರತ ಮುನ್ನಡೆ ಸಾಧಿಸುವ ನಿರೀಕ್ಷೆ ಮೂಡಿತ್ತು.

ಆದರೆ ನಂತರ ಚೀನಾದ ಜೋಡಿ ಆಟದ ವೇಗವನ್ನು ಹೆಚ್ಚಿಸಿತು. ಎರಡನೇ ಗೇಮ್‌ನಲ್ಲಿ 21-13ರಿಂದ ಗೆದ್ದ ಚೀನಾದ ಆಟಗಾರ್ತಿಯರು ನಿರ್ಣಾಯಕ ಮೂರನೇ ಗೇಮ್‌ನಲ್ಲೂ ಭಾರತದ ಜೋಡಿಗೆ ಅವಕಾಶ ನೀಡಲಿಲ್ಲ. 21-8 ಅಂತರದಲ್ಲಿ ಮೂರನೇ ಗೇಮ್‌ ಗೆದ್ದು ಫೈನಲ್‌ಗೆ ಪ್ರವೇಶಿಸಿದರು. ಇದರೊಂದಿಗೆ ತ್ರಿಶಾ ಮತ್ತು ಗಾಯತ್ರಿ ಫೈನಲ್‌ ಅವಕಾಶ ಕಳೆದುಕೊಂಡರೂ, ಸೆಮಿಫೈನಲ್ ತಲುಪಿದ್ದರಿಂದ ಕಂಚಿನ ಪದಕವನ್ನು ಖಚಿತಪಡಿಸಿಕೊಂಡರು.

ಇದನ್ನೂ ಓದಿ:

15 ವರ್ಷಗಳ ಬಳಿಕ ಪದಕ

ಈ ಕಂಚಿನ ಪದಕ ಭಾರತದ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್‌ಗೆ ವಿಶೇಷ ಸಾಧನೆಯಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತ ಕೊನೆಯ ಬಾರಿ 2011ರಲ್ಲಿ ಪದಕ ಗೆದ್ದಿತ್ತು. ಆಗ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು.

ಆರಂಭದಿಂದಲೇ ಭರ್ಜರಿ ಪ್ರದರ್ಶನ

ಟೂರ್ನಿಯ ಆರಂಭದಿಂದಲೂ ತ್ರಿಶಾ-ಗಾಯತ್ರಿ ಜೋಡಿ ಸ್ಥಿರ ಪ್ರದರ್ಶನ ನೀಡಿತು. 64ರ ಸುತ್ತಿನಲ್ಲಿ ಸ್ಪೇನ್‌ನ ಪೌಲಾ ಲೋಪೆಜ್ ಮತ್ತು ಲೂಸಿಯಾ ರೊಡ್ರಿಗಸ್ ವಿರುದ್ಧ 21-9, 21-13 ಅಂತರದಲ್ಲಿ ಸುಲಭ ಜಯ ದಾಖಲಿಸಿತು. ಬಳಿಕ 32ರ ಸುತ್ತಿನಲ್ಲಿ ಅಮೆರಿಕದ ಲಾರೆನ್ ಲ್ಯಾಮ್ ಮತ್ತು ಅಲಿಸನ್ ಲೀ ಅವರನ್ನು 21-15, 21-12ರಿಂದ ಮಣಿಸಿತು.

16ರ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಜಪಾನ್‌ನ ರಿನ್ ಇವಾನಾಗಾ ಮತ್ತು ಕೀ ನಕಾನಿಶಿ ವಿರುದ್ಧ 21-16, 21-12ರಿಂದ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಚೀನಾದ ಜಿಯಾ ಯಿ ಫ್ಯಾನ್ ಮತ್ತು ಜಾಂಗ್ ಶು ಕ್ಸಿಯಾನ್ ವಿರುದ್ಧ 16-21, 21-15, 21-13ರ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು.

ಮುಂದಿನ ಪೀಳಿಗೆಗೆ ದೊಡ್ಡ ಪ್ರೇರಣೆ

ಸೆಮಿಫೈನಲ್‌ನಲ್ಲಿ ಸೋಲು ಎದುರಾದರೂ, ವಿಶ್ವದ ಅತ್ಯುತ್ತಮ ಜೋಡಿಗಳ ವಿರುದ್ಧ ಸತತವಾಗಿ ಗೆದ್ದು ಸೆಮಿಫೈನಲ್‌ ತಲುಪಿರುವ ತ್ರಿಶಾ ಮತ್ತು ಗಾಯತ್ರಿಯ ಸಾಧನೆ ಭಾರತೀಯ ಬ್ಯಾಡ್ಮಿಂಟನ್‌ಗೆ ಮಹತ್ವದ ಮೈಲಿಗಲ್ಲಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 15 ವರ್ಷಗಳ ಪದಕದ ಬರ ನೀಗಿಸಿರುವ ಈ ಜೋಡಿ, ಭಾರತೀಯ ಮಹಿಳಾ ಡಬಲ್ಸ್‌ಗೆ ಹೊಸ ಭರವಸೆ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !