ಬೆಳಗ್ಗೆ ತಿಂಡಿಗೆ ಸ್ವಲ್ಪ ಸ್ವೀಟ್ ಸ್ವೀಟ್ ಆಗಿರೋ ತಿಂಡಿ ತಿನ್ಬೇಕು ಅನ್ನೋ ಆಸೆಯಾದಾಗ ಈ ಸುರ್ನೋಳಿ ದೋಸೆ ಒಮ್ಮೆ ಮಾಡಿ ನೋಡಿ. ಕೊಂಕಣಿ ಶೈಲಿಯ ಈ ಸಿಹಿ ದೋಸೆಯಲ್ಲಿ ಅಕ್ಕಿ, ಅವಲಕ್ಕಿ, ತೆಂಗಿನಕಾಯಿ ಹಾಗೂ ಬೆಲ್ಲ ಸೇರೊದ್ರಿಂದ ಒಂದು ವಿಶೇಷ ರುಚಿ ಇಲ್ಲಿ ಸಿಗೋದಂತು ಖಂಡಿತ. ವಿಶೇಷ ಅಂದ್ರೆ ಸಾಮಾನ್ಯ ದೋಸೆಯಂತೆ ಹಿಟ್ಟನ್ನು ತೆಳುವಾಗಿ ಹರಡಬೇಕಿಲ್ಲ. ಹಾಗಾದರೆ ಇದನ್ನು ಮನೆಯಲ್ಲೇ ಸುಲಭವಾಗಿ ಹೇಗೆ ಮಾಡುವುದು? ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು
ಅಕ್ಕಿ – 1½ ಕಪ್
ಅವಲಕ್ಕಿ – ¾ ಕಪ್
ತುರಿದ ತೆಂಗಿನಕಾಯಿ – ½ ಕಪ್
ಹುಳಿ ಮೊಸರು/ಮಜ್ಜಿಗೆ – ¾ ಕಪ್
ಬೆಲ್ಲ – ¾ ಕಪ್
ಮೆಂತ್ಯ ಕಾಳು – 1 ಟೀಸ್ಪೂನ್
ಉಪ್ಪು – ರುಚಿಗೆ
ತುಪ್ಪ/ಎಣ್ಣೆ – ಅಗತ್ಯವಷ್ಟು
ತಯಾರಿಸುವ ವಿಧಾನ
ಅಕ್ಕಿ ಮತ್ತು ಮೆಂತ್ಯ ಕಾಳನ್ನು 4–5 ಗಂಟೆ ನೆನೆಸಿಡಿ. ಅವಲಕ್ಕಿಯನ್ನು ಪ್ರತ್ಯೇಕವಾಗಿ ಸ್ವಲ್ಪ ಹೊತ್ತು ನೆನೆಸಿಕೊಳ್ಳಿ ಸಾಕು.
ಈಗ ನೆನೆಸಿದ ಅಕ್ಕಿ, ಅವಲಕ್ಕಿ, ತೆಂಗಿನಕಾಯಿ, ಬೆಲ್ಲ, ಮೊಸರು ಮತ್ತು ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ಸ್ವಲ್ಪ ದಪ್ಪವಾಗಿರಲಿ. ಈ ಹಿಟ್ಟನ್ನು 8–10 ಗಂಟೆ ಹುದುಗಿಸಿಡಿ.
ಕಾವಲಿಗೆ ಸ್ವಲ್ಪ ತುಪ್ಪ ಸವರಿ, ಒಂದು ಸೌಟು ಹಿಟ್ಟನ್ನು ಹಾಕಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಹಿಟ್ಟನ್ನು ಸಾಮಾನ್ಯ ದೋಸೆಯಂತೆ ಹರಡುವುದು ಬೇಡ.
ದೋಸೆಯ ಮೇಲೆ ಸಣ್ಣ ಗುಳ್ಳೆಗಳು ಬಂದ್ರೆ ದೋಸೆ ಚೆನ್ನಾಗಿ ಬೆಂದಿದೆ ಅಂತ ಅರ್ಥ. ಈ ದೋಸೆಯನ್ನು ಮಗುಚಿ ಹಾಕೋ ಅವಶ್ಯಕತೆ ಇಲ್ಲ. ಈಗ ಬಿಸಿಬಿಸಿಯಾದ ಸುರ್ನೋಳಿಯನ್ನು ತುಪ್ಪ ಅಥವಾ ಬೆಣ್ಣೆಯೊಂದಿಗೆ ಸವಿದರೆ ರುಚಿ ಡಬಲ್ ಆಗುತ್ತೆ.



