August 23, 2026
Sunday, August 23, 2026
spot_img

ಟ್ರಾನ್ಸ್‌ಫಾರ್ಮರ್ ಕದಿಯಲು ಹೋದ ಖದೀಮರಿಗೆ ಕೆಸರೇ ವಿಲನ್: ದುರಾದೃಷ್ಟ ಅಂದ್ರೆ ಇದೇನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ಟ್ರಾನ್ಸ್‌ಫಾರ್ಮರ್ ಕಳ್ಳತನ ಮಾಡಲು ಹೋದ ಕಳ್ಳರ ತಂಡವೊಂದು ಪ್ರಕೃತಿಯ ಮುನಿಸಿಗೆ ಸಿಲುಕಿ ಜೈಲು ಸೇರಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಕಳ್ಳತನ ಮಾಡಲು ಹೊಲಕ್ಕೆ ನುಗ್ಗಿದ್ದ ಕಳ್ಳರ ಕಾರು ಕೆಸರಿನಲ್ಲಿ ಸಿಲುಕಿಕೊಂಡಿದೆ. ಅದನ್ನು ಹೊರತೆಗೆಯಲು ಮರುದಿನ ದೊಡ್ಡ ರಿಕವರಿ ಟ್ರಕ್ ತಂದಾಗ, ಆ ಟ್ರಕ್ ಕೂಡ ಕೆಸರಿನಲ್ಲಿ ಹೂತುಹೋಗಿ ಕಳ್ಳರ ಪ್ಲ್ಯಾನ್ ಉಲ್ಟಾ ಹೊಡೆದಿದೆ.

ನಡೆದಿದ್ದೇನು?

ಮೊಗಾ ಜಿಲ್ಲೆಯ ತಖ್ತುಪುರ ಗ್ರಾಮದ ರೈತ ಹರ್ಜಿಂದರ್ ಸಿಂಗ್ ಎಂಬುವವರ ಗದ್ದೆಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ತಡರಾತ್ರಿ ಮೂವರು ಖದೀಮರು ಗದ್ದೆಯಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅನ್ನು ಬಿಚ್ಚಿ ಕದಿಯಲು ಕಾರಿನಲ್ಲಿ ಬಂದಿದ್ದರು. ಆದರೆ, ನೀರು ತುಂಬಿದ್ದ ಭತ್ತದ ಗದ್ದೆಯ ಮಣ್ಣಿನಲ್ಲಿ ಅವರ ಕಾರು ಕೆಸರೊಳಗೆ ಸಿಲುಕಿಕೊಂಡಿದೆ. ಕಾರನ್ನು ಹೊರತೆಗೆಯಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ, ಕಳ್ಳರು ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.

ಟ್ರಕ್ ತಂದರೂ ಮುಗಿಯದ ಪಜೀತಿ

ಕಳ್ಳರು ಅಷ್ಟಕ್ಕೆ ಸುಮ್ಮನಾಗದೆ, ಮರುದಿನ ಬೆಳಗ್ಗೆ ಕೆಸರಲ್ಲಿ ಸಿಲುಕಿದ್ದ ಕಾರನ್ನು ಎಳೆದು ಹೊರತೆಗೆಯಲು ಒಂದು ದೊಡ್ಡ ಹೆವಿ ರಿಕವರಿ ಟ್ರಕ್ ಸಮೇತ ಗದ್ದೆಗೆ ಮರಳಿದ್ದಾರೆ. ಆದರೆ ಕಳ್ಳರ ದುರದೃಷ್ಟಕ್ಕೆ ಆ ದೊಡ್ಡ ಟ್ರಕ್ ಕೂಡ ಗದ್ದೆಯ ಕೆಸರಿನಲ್ಲಿ ಜಾರಿ ಅಲ್ಲೇ ಲಾಕ್ ಆಗಿದೆ. ಗದ್ದೆಯ ಮಧ್ಯೆ ಕಾರು ಮತ್ತು ಟ್ರಕ್ ಎರಡೂ ಸಿಲುಕಿಕೊಂಡಿದ್ದನ್ನು ನೋಡಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಮಾನ ಬಂದಿದೆ.

ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಗ್ರಾಮಸ್ಥರು ಸ್ಥಳಕ್ಕೆ ಬಂದು ಪ್ರಶ್ನಿಸಿದಾಗ ಕಳ್ಳರು ತಬ್ಬಿಬ್ಬುಗೊಂಡು ಬೇರೆ ಬೇರೆ ಕಥೆಗಳನ್ನು ಹೇಳಲು ಶುರುಮಾಡಿದ್ದಾರೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ತೀವ್ರವಾಗಿ ವಿಚಾರಣೆ ನಡೆಸಿದಾಗ ಟ್ರಾನ್ಸ್‌ಫಾರ್ಮರ್ ಕಳ್ಳತನದ ಅಸಲಿ ಕಥೆ ಹೊರಬಿದ್ದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಓಡಿಹೋಗುತ್ತಿದ್ದ ಕಳ್ಳರ ಪೈಕಿ ಲವ್‌ಪ್ರೀತ್ ಸಿಂಗ್ ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:

ಇಬ್ಬರು ಕಳ್ಳರು ಪರಾರಿ:

ರೈತ ಹರ್ಜಿಂದರ್ ಸಿಂಗ್ ನೀಡಿದ ದೂರಿನ ಮೇರೆಗೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಲವ್‌ಪ್ರೀತ್ ಸಿಂಗ್‌ನನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು, ಕೆಸರಲ್ಲಿ ಸಿಲುಕಿದ್ದ ಕಾರು ಮತ್ತು ಟ್ರಕ್ ಎರಡನ್ನೂ ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಉಳಿದ ಇಬ್ಬರು ಆರೋಪಿಗಳಾದ ಜಸ್‌ದೀಪ್ ಸಿಂಗ್ ಮತ್ತು ವಕೀಲ್ ಸಿಂಗ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಗ್ಯಾಂಗ್ ಈ ಹಿಂದೆಯೂ ಗ್ರಾಮೀಣ ಭಾಗಗಳಲ್ಲಿ ಟ್ರಾನ್ಸ್‌ಫಾರ್ಮರ್ ಕಳ್ಳತನ ಮಾಡಿದ್ದೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಎಸ್‌ಪಿ ಅನ್ವರ್ ಅಲಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !