August 23, 2026
Sunday, August 23, 2026
spot_img

ಭದ್ರಾ ನೀರಿಗಾಗಿ ರೈತರ ನಡುವೆ ಭಿನ್ನಾಭಿಪ್ರಾಯ: ಒಮ್ಮತದ ನಿರ್ಧಾರಕ್ಕೆ ಬರುವಂತೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಕರೆ

ಹೊಸದಿಗಂತ ವರದಿ ದಾವಣಗೆರೆ:

ಭದ್ರಾ ಡ್ಯಾಂ ನಿಂದ ನಾಲೆಗೆ ನೀರು ಬಿಡಬೇಕೋ, ಬೇಡವೋ ಎಂಬ ಬಗ್ಗೆ ರೈತರಲ್ಲೇ ಒಮ್ಮತವಿಲ್ಲ. ಎರಡೂ ಕಡೆ ರೈತರು ಒಮ್ಮತದಿಂದ ಮುಂದೆ ಬಂದರೆ, ಮತ್ತೊಂದು ಸಭೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸ್ಪಷ್ಟಪಡಿಸಿದರು.

ತಾಲೂಕಿನ ಮಾಯಕೊಂಡ ಕ್ಷೇತ್ರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾ ಡ್ಯಾಂ ನಿಂದ ನಾಲೆಗೆ ನೀರು ಬಿಡುವ ವಿಚಾರವಾಗಿ ಒಬ್ಬಿಬ್ಬರು ನನ್ನನ್ನೂ ಸಹ ವೈಯಕ್ತಿಕವಾಗಿ ಟೀಕಿಸಿದ್ದಾರೆ. ರೈತರು ನಾಲೆಗೆ ನೀರು ಬಿಡಿ ಅಂದರೆ ಬಿಡುತ್ತೇವೆ, ಬೇಡ ಅಂದರೆ ಬೇಡ. ಮೊದಲು ರೈತರೆಲ್ಲರೂ ಸೇರಿ ಒಮ್ಮತದ ಅಭಿಪ್ರಾಯಕ್ಕೆ ಬರಲಿ. ಮೊನ್ನೆ ನಡೆದ ಸಭೆಯಲ್ಲೂ ನೀರಿನ ವಿಚಾರವಾಗಿ ನಿರ್ಧಾರ ಕೈಗೊಳ್ಳಲು ರೈತರಲ್ಲೇ ಒಮ್ಮತ ಬರಲಿಲ್ಲ ಎಂದರು.

ಕೆಲ ರೈತರು ನಾಲೆಗೆ ತಕ್ಷಣದಿಂದಲೇ ನೀರು ಬಿಡುವಂತೆ, ಮಳೆಗಾಲದ ಬೆಳೆಗೆ ನೀರು ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನೂ ಕೆಲವರು ಭತ್ತಕ್ಕೆ ಈಗಾಗಲೇ ಅವಧಿಯಾಗಿದ್ದು, ಈಗ ನಾಲೆಗೆ ನೀರು ಬಿಡುವುದು ಬೇಡ. ಬೇಸಿಗೆ ಬೆಳೆಗೆ ಜನವರಿಯಲ್ಲಿ ಸತತವಾಗಿ 120 ದಿನ ನೀರು ಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಎಲ್ಲರೊಂದಿಗೂ ಕೂಲಂಕುಷವಾಗಿ ಚರ್ಚಿಸಿ, ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಿದ ನಂತರವೇ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು.

ಇದನ್ನೂ ಓದಿ:

ತುಂಗಾ ನದಿಯಿಂದ ಭದ್ರಾ ಡ್ಯಾಂ ಗೆ ನೀರು ಲಿಫ್ಟ್ ಮಾಡಿದ ನಂತರವೇ ಭದ್ರಾ ಮೇಲ್ದಂಡೆಗೆ ಟ್ರಯಲ್ ರನ್ ಮಾಡುವಂತೆ ಸ್ಪಷ್ಟವಾಗಿ ಸೂಚಿಸಿದ್ದೇವೆ. ಭದ್ರಾ ಡ್ಯಾಂ ಗೆ ಒಳಹರಿವಿನ ಪ್ರಮಾಣ ಏರಿಕೆಯಾಗುವುದು, ಇಳಿಕೆಯಾಗುವುದು ಆಗುತ್ತಿದೆ. ಸಧ್ಯಕ್ಕೆ ಒಳಹರಿವಿನ ಕೊರತೆ ಇರುವುದು ಸ್ಪಷ್ಟವಾಗಿದೆ. ಭತ್ತ ಮತ್ತು ಅಡಿಕೆಗೆ ಈಗ ನೀರು ಬಿಡಬಹುದು. ಈಗ ಮಳೆಗಾಲದ ಬೆಳೆಗೆಂದು ಆನ್ ಅಂಡ್ ಆಫ್ ಮಾಡಿ, ನೀರು ಹರಿಸಿದರೆ ಅಚ್ಚುಕಟ್ಟು ಕೊನೆಭಾಗಕ್ಕೆ ನೀರು ಬರುವುದಿಲ್ಲವೆಂಬುದು ಆ ಭಾಗದ ರೈತರ ಅಳಲು. ಎರಡೂ ಕಡೆಯ ರೈತರೂ ಬದುಕಬೇಕು. ಕುಡಿಯುವ ನೀರಿಗಂತೂ ಸಮಸ್ಯೆ ಇಲ್ಲ ಎಂದು ಅವರು ವಿವರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !