September 5, 2026
Saturday, September 5, 2026
spot_img

ಕರಾವಳಿ ಕಾವಲುಪಡೆಯ ಕ್ಷಿಪ್ರ ಕಾರ್ಯಾಚರಣೆ: ಸಮುದ್ರದಲ್ಲಿ ಸಿಲುಕಿದ್ದ 9 ಮೀನುಗಾರರ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವಮಂಗಳೂರು ಬಂದರು ಸಮೀಪ ಸಮುದ್ರದಲ್ಲಿ ಬೋಟ್ ಇಂಜಿನ್ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದ 9 ಮೀನುಗಾರರನ್ನು ಭಾರತೀಯ ಕರಾವಳಿ ಕಾವಲುಪಡೆ ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತಂದಿದೆ.

ನವಮಂಗಳೂರು ಬಂದರಿನಿಂದ ಸುಮಾರು 20 ನಾಟಿಕಲ್ ಮೈಲು ದೂರದಲ್ಲಿ 9 ಮಂದಿ ಮೀನುಗಾರರಿದ್ದ ಮೀನುಗಾರಿಕಾ ಬೋಟ್ ಇಂಜಿನ್ ವೈಫಲ್ಯದಿಂದ ಸಮುದ್ರದಲ್ಲೇ ಸ್ಥಗಿತಗೊಂಡಿತ್ತು. ಇದೇ ವೇಳೆ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದ ಹಿನ್ನೆಲೆಯಲ್ಲಿ ಮೀನುಗಾರರ ಸುರಕ್ಷತೆ ಬಗ್ಗೆ ಆತಂಕ ಉಂಟಾಗಿತ್ತು. ಮಾಹಿತಿ ಲಭ್ಯವಾದ ತಕ್ಷಣ ಭಾರತೀಯ ಕರಾವಳಿ ಕಾವಲುಪಡೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ತನ್ನ ಕಾರ್ಯಾಚರಣೆಯಲ್ಲಿ ‘ಸಿ-448’ ಹಡಗು ಮುಲಕ ಸಂಕಷ್ಟದಲ್ಲಿದ್ದ ಮೀನುಗಾರಿಕಾ ನೌಕೆಯನ್ನು ಪತ್ತೆಹಚ್ಚಿ, ಅದರಲ್ಲಿದ್ದ ಎಲ್ಲಾ 9 ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಬಳಿಕ ಮೀನುಗಾರರನ್ನು ಹಳೇ ಮಂಗಳೂರು ಬಂದರಿಗೆ ಸುರಕ್ಷಿತವಾಗಿ ಕರೆತರಲಾಯಿತು. ಯಾವುದೇ ಪ್ರಾಣಾಪಾಯ ಸಂಭವಿಸದೆ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಸಮುದ್ರದಲ್ಲಿ ಹವಾಮಾನ ಪರಿಸ್ಥಿತಿ ಪ್ರತಿಕೂಲವಾಗಿರುವ ಸಂದರ್ಭದಲ್ಲಿ ಮೀನುಗಾರಿಕಾ ನೌಕೆಗಳ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ಇಂತಹ ಸಂದರ್ಭಗಳಲ್ಲಿ ತುರ್ತು ಸಂಪರ್ಕ ವ್ಯವಸ್ಥೆ ಹಾಗೂ ಕರಾವಳಿ ಕಾವಲುಪಡೆಯ ನೆರವು ಮೀನುಗಾರರ ಜೀವ ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಮುದ್ರ ಮಧ್ಯೆ ಸಂಕಷ್ಟಕ್ಕೆ ಸಿಲುಕಿದ್ದ 9 ಮೀನುಗಾರರನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ ಸುರಕ್ಷಿತವಾಗಿ ದಡಕ್ಕೆ ಕರೆತಂದ ಕರಾವಳಿ ಕಾವಲುಪಡೆಯ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !