August 24, 2026
Monday, August 24, 2026
spot_img

25 ಗಂಟೆ, 250 ದಾಸರಪದ: ಉಡುಪಿಯಲ್ಲಿ ವಿಶ್ವದಾಖಲೆ ಬರೆಯಿತು ಸಂಗೀತಾ ಬಾಲಚಂದ್ರ ಗಾಯನ ಮ್ಯಾರಥಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಕ್ತಿ ಸಂಗೀತದ ಲೋಕದ ಅಪರೂಪದ ಸಾಧನೆಯೊಂದಕ್ಕೆ ಪಡವಿಗೊಡೆಯನ ನಾಡು ಉಡುಪಿ ಸಾಕ್ಷಿಯಾಗಿದೆ!

ಖ್ಯಾತ ಗಾಯಕಿ, ಆಕಾಶವಾಣಿಯ ಉನ್ನತ ದರ್ಜೆಯ ಕಲಾವಿದೆ, ಹಿನ್ನೆಲೆ ಗಾಯಕಿ, ವಿದುಷಿ ಸಂಗೀತಾ ಬಾಲಚಂದ್ರ ಬರೋಬ್ಬರಿ 25 ಗಂಟೆಗಳ ಕಾಲ 250 ದಾಸರಪದಗಳನ್ನು ನಿರಂತರವಾಗಿ ಹಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.


ಉಡುಪಿಯ ಗೀತಾ ಮಂದಿರದ ಶ್ರೀ ಪುತ್ತಿಗೆ ನರಸಿಂಹ ಸಭಾಂಗಣದಲ್ಲಿ ನಡೆದ ‘ಪಂಚವಿಶಂತಿ‘ ಎಂಬ ಈ ವಿಶೇಷ ಗಾಯನ ಮ್ಯಾರಥಾನ್ ಆ.23ರಂದು ಬೆಳಿಗ್ಗೆ ೬.೩೦ಕ್ಕೆ ಆರಂಭಗೊಂಡು, ಆ.24ರಂದು ಬೆಳಿಗ್ಗೆ 7.40ಕ್ಕೆ ಸಂಪನ್ನಗೊಂಡಿದೆ.


25 ಗಂಟೆಗಳ ಕಾಲ ಭಕ್ತಿಗೀತೆಯೇ ಉಸಿರು


ಈ ಅಪರೂಪದ ಗಾಯನ ಪ್ರಯತ್ನದಲ್ಲಿ ಸಂಗೀತಾ ಬಾಲಚಂದ್ರ ಅವರು 250 ದಾಸರಪದಗಳನ್ನು ಸತತವಾಗಿ ಪ್ರಸ್ತುತಪಡಿಸಿದರು. ಈ ಸಾಧನೆಯ ಮತ್ತೊಂದು ವಿಶೇಷವೆಂದರೆ, ಇಡೀ 25 ಗಂಟೆಗಳ ಕಾರ್ಯಕ್ರಮವನ್ನು ದಾಸ ಸಾಹಿತ್ಯ, ಭಕ್ತಿಗೀತೆ, ಹರಿದಾಸರ ಸಂಯೋಜನೆಗಳಿಗೆ ಮಾತ್ರ ಮೀಸಲಿಡಲಾಗಿತ್ತು.


ವಿಶ್ವದಾಖಲೆಯ ಅಧಿಕೃತ ಘೋಷಣೆ


ಸಂಗೀತಾ ಬಾಲಚಂದ್ರ ಅವರ ಈ ಸಾಧನೆಯನ್ನು ಅಧಿಕೃತವಾಗಿ ಪರಿಶೀಲಿಸಲು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥ ಡಾ. ಮನೀಷ್ ವಿಷ್ಣೋಯಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 25 ಗಂಟೆಗಳ ಗಾಯನ ಮ್ಯಾರಥಾನ್ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಅವರು ವಿಶ್ವದಾಖಲೆಯನ್ನು ಅಧಿಕೃತವಾಗಿ ಘೋಷಿಸಿ ಪ್ರಮಾಣಪತ್ರವನ್ನು ಪ್ರದಾನ ಮಾಡಿದರು.


ಗೀತ ಗಂಗೋತ್ರಿ ಬಿರುದು


ವಿಶ್ವದಾಖಲೆ ಪ್ರಮಾಣಪತ್ರದ ಬಳಿಕ ನಡೆದ ಸರಳ ಸಮಾರಂಭದಲ್ಲಿ ಸಂಗೀತಾ ಬಾಲಚಂದ್ರ ಅವರಿಗೆ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಸಲಹೆಯಂತೆ, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ‘ಗೀತ ಗಂಗೋತ್ರಿ’ ವಿಶೇಷ ಬಿರುದನ್ನು ನೀಡಿ ಗೌರವಿಸಿದರು.


ಈ ಸಂದರ್ಭ ಮಾತನಾಡಿದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, 25 ಗಂಟೆಗಳ ಅವಧಿಯಲ್ಲಿ ಹಾಡಲಾದ 250 ದಾಸರಪದಗಳು ದಾಸರ ಸಾಹಿತ್ಯ ಮತ್ತು ಸಂಯೋಜನೆಗಳಿಗೆ ಮತ್ತಷ್ಟು ಮನ್ನಣೆ ತಂದುಕೊಟ್ಟಿವೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಈ ದಾಖಲೆಯನ್ನು ಮೀರಿಸುವ ರೀತಿಯಲ್ಲಿ 50 ಗಂಟೆಗಳ ಗಾಯನ ಮ್ಯಾರಥಾನ್ ನಡೆಸುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.


ಗಾಯನ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಪಕ್ಕವಾದ್ಯ ಕಲಾವಿದರ ಪಾತ್ರವೂ ಪ್ರಮುಖವಾಗಿತ್ತು. ಕೀಬೋರ್ಡ್‌ನಲ್ಲಿ ಖ್ಯಾತ ಸಂಗೀತಗಾರ ಗುರುರಾಜ್, ಮೋಗಿ ಗುರುರಾಜ್ ಮತ್ತು ರಾಜ್ಯ ಕರಿವೆಲ್ಲೂರ್ ಅವರು ಪ್ರದರ್ಶನ ನೀಡಿದರು. ರಿದಂ ಪ್ಯಾಡ್‌ನಲ್ಲಿ ಪ್ರಭಾಕರ ಅಮ್ಮಿಂಗೋಡ್ ಮತ್ತು ವಾಮನ ಕೆ., ತಬಲಾದಲ್ಲಿ ದೀಕ್ಷಿತ್ ಕೊಡಂಚ ಮತ್ತು ದೀಪಕ್ ರಾಜ್ ಉಲ್ಲಾಸು ಮತ್ತು ಸಂತೋಷ್ ವಿಟ್ಟಲ್ ಕೊಳಲು ನುಡಿಸಿ ಸಂಗೀತಾ ಬಾಲಚಂದ್ರ ಅವರಿಗೆ ಸಾಥ್ ನೀಡಿದರು.


ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥ ಡಾ. ಮನೀಷ್ ವಿಷ್ಣೋಯಿ ಮಾತನಾಡಿ, ಉಡುಪಿಯಂತಹ ಆಧ್ಯಾತ್ಮಿಕ ನಗರದಲ್ಲಿ ಇಂತಹ ಅಪರೂಪದ ಗಾಯನ ಸಾಧನೆ ನಡೆದಿರುವುದು ವಿಶೇಷ ಎಂದು ಹೇಳಿದರು. ಶ್ರೀಕೃಷ್ಣನ ಸನ್ನಿಧಿಯಲ್ಲಿ 25 ಗಂಟೆಗಳ ಗಾಯನದ ಮೂಲಕ ಸಂಗೀತಾ ಬಾಲಚಂದ್ರ ಅವರು ತಮ್ಮ ಸಾಧನೆಯನ್ನು ಭಕ್ತಿಗೆ ಸಮರ್ಪಿಸಿರುವುದು ಈ ಕಾರ್ಯಕ್ರಮಕ್ಕೆ ಮತ್ತಷ್ಟು ವಿಶೇಷತೆ ನೀಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !