August 24, 2026
Monday, August 24, 2026
spot_img

ಬೈಕ್‌ಗಳಲ್ಲಿ ಹಸಿರು ಧ್ವಜ, ರ್‍ಯಾಲಿಗಳಿಗೆ ಅವಕಾಶ ಇಲ್ಲ: ಈದ್ ಮಿಲಾದ್ ಕಾಲ್ನಡಿಗೆ ಜಾಥಾ ಬಗ್ಗೆ ಉಳ್ಳಾಲ ದರ್ಗಾ ಅಧ್ಯಕ್ಷರ ಸ್ಪಷ್ಟೋಕ್ತಿ

ಹೊಸದಿಗಂತ ಉಳ್ಳಾಲ:


ಈದ್ ಮಿಲಾದ್ ಆಚರಣೆ ಪ್ರಯುಕ್ತ ನಾಳೆ ಬೆಳಿಗ್ಗೆ 7.30ಕ್ಕೆ ಉಳ್ಳಾಲ ಕೋಟೆಪುರದಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದ್ದು, ಚೋಟಾ ಮಂಗಳೂರು, ಉಳ್ಳಾಲ ಪೇಟೆ, ಮುಕ್ಕಚೇರಿ, ಆಝಾದ್ ನಗರ ರಸ್ತೆಯಾಗಿ ಮೇಲಂಗಡಿ ಮೂಲಕ ಜಾಥಾ ಉಳ್ಳಾಲ ದರ್ಗಾಕ್ಕೆ ತಲುಪಲಿದೆ. ಈ ಜಾಥಾ ಸಂದರ್ಭ ಬೈಕ್ ಗೆ ಹಸಿರು ಧ್ವಜ ಕಟ್ಟುವುದು, ಅನಗತ್ಯ ದ್ವಿಚಕ್ರ ವಾಹನ ರ್‍ಯಾಲಿಗೆ ಅವಕಾಶ ಇಲ್ಲ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಸ್ಪಷ್ಟ ಪಡಿಸಿದ್ದಾರೆ.


ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ ಅವರ ೧೫೦೧ನೇ ಜನ್ಮದಿನಾಚರಣೆ ಪ್ರಯುಕ್ತ ನಾಳೆ ಬೆಳಿಗ್ಗೆ ಕೋಟೆಪುರದಿಂದ ಆರಂಭಗೊಳ್ಳುವ ಕಾಲ್ನಡಿಗೆ ಜಾಥಾ, 9.30 ಗಂಟೆಗೆ ದರ್ಗಾದಲ್ಲಿ ನಡೆಯುವ ಝಿಯಾರತ್ ಹಾಗೂ ಸಂದೇಶದೊಂದಿಗೆ ಸಮಾಪನ ಗೊಳ್ಳಲಿದೆ. ಈ ಜಾಥಾದಲ್ಲಿ ಸಚಿವ ಯು.ಟಿ. ಖಾದರ್, ದರ್ಗಾ ಅಧೀನದಲ್ಲಿ ಬರುವ 27 ಮೊಹಲ್ಲಾಗಳ ವ್ಯಾಪ್ತಿಯ 34 ಮದ್ರಸ, ಮಸೀದಿಗಳ ಖತೀಬರು ಮುಅಲ್ಲಿಂಗಳು,ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.


ಜಾಥದಲ್ಲಿ ಪ್ರವಾದಿ ಜನ್ಮ ದಿನದ ಕುರಿತಂತೆ ಘೋಷಣೆ ಮಾಡುವ ಒಂದು ಜೀಪು, ಪ್ರವಾದಿ ಕೀರ್ತನೆಯ ಹಾಡುಗಳನ್ನು ಆಲಾಪಿಸುವ ಒಂದು ಟ್ರಕ್ ಮಾತ್ರ ಇರಲಿದೆ. ಉಳಿದ ಯಾವುದೇ ಘೋಷಣೆಗಳಿಗಾಗಲಿ, ಅನಧಿಕೃತ ವಾಹನಗಳಿಗೆ ಅವಕಾಶ ಇರುವುದಿಲ್ಲ. ರಸ್ತೆಯಲ್ಲಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ಜಾಥಾ ನಡೆಸಲಾಗುವುದೆಂದು ಅವರು ಹೇಳಿದರು.


ಉಳ್ಳಾಲ ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ಧೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ, ಕೋಶಾಧಿಕಾರಿ ನಾಝೀಮ್ ಮುಕ್ಕಚೇರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !