ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ H1N1 ಪ್ರಕರಣಗಳ ಕುರಿತು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಭಯ ನೀಡಿದೆ. ಮಳೆಗಾಲದ ಅವಧಿಯಲ್ಲಿ ವಾತಾವರಣದಲ್ಲಾಗುವ ಬದಲಾವಣೆಯಿಂದಾಗಿ ಸೀಸನಲ್ ಫ್ಲೂ ಹೆಚ್ಚಾಗುವುದು ಸಹಜ ಪ್ರಕ್ರಿಯೆಯಾಗಿದ್ದು, ಪರಿಸ್ಥಿತಿಯನ್ನು ಎದುರಿಸಲು ರಾಜ್ಯದ ವೈದ್ಯಕೀಯ ವ್ಯವಸ್ಥೆ ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ಇಲಾಖೆ ತಿಳಿಸಿದೆ.

ಸಚಿವರ ಉನ್ನತ ಮಟ್ಟದ ಸಭೆ
ಆರೋಗ್ಯ ಸಚಿವರಾದ ಯು. ಟಿ. ಖಾದರ್ ಅವರು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಕರ್ಯಗಳು, ಬೆಡ್‌ಗಳು, ಪರೀಕ್ಷಾ ಕಿಟ್‌ಗಳು ಹಾಗೂ ಔಷಧಗಳ ದಾಸ್ತಾನು ಸಮರ್ಪಕವಾಗಿದೆ. ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಾದರೂ ತಕ್ಷಣ ಸ್ಪಂದಿಸಲು ವೈದ್ಯಕೀಯ ತಂಡಗಳು ಸಿದ್ಧವಾಗಿವೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಸೋಂಕಿತರೆಲ್ಲರೂ ಗುಣಮುಖ, ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿ
ಸಮಗ್ರ ಆರೋಗ್ಯ ಮಾಹಿತಿ ವೇದಿಕೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, 2026ರ ಆಗಸ್ಟ್ 22ರವರೆಗೆ ರಾಜ್ಯಾದ್ಯಂತ 4,212 ಪ್ರಕರಣಗಳು ವರದಿಯಾಗಿದ್ದು, 2025ರ (4,583) ಹಾಗೂ 2024ರ (3,903) ಅಂಕಿ-ಅಂಶಗಳಿಗೆ ಹೋಲಿಸಿದರೆ ಇದು ಸಾಮಾನ್ಯ ಮಟ್ಟದಲ್ಲೇ ಇದೆ. ಹತ್ತಿರದ ಪ್ರದೇಶಗಳ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 2,070, ಬೆಂಗಳೂರು ನಗರದಲ್ಲಿ 1,011 ಹಾಗೂ ಉಡುಪಿಯಲ್ಲಿ 300 ಪ್ರಕರಣಗಳು ದಾಖಲಾಗಿವೆ.
ಮುಖ್ಯವಾಗಿ, ಈವರೆಗೆ ವರದಿಯಾದ ಬಹುತೇಕ ರೋಗಿಗಳು ಮನೆಯಲ್ಲೇ ವಿಶ್ರಾಂತಿ ಪಡೆದು ಸಂಪೂರ್ಣ ಗುಣಮುಖರಾಗಿದ್ದು, ಯಾರೂ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದು ಇಲಾಖೆ ಖಚಿತಪಡಿಸಿದೆ.
ಸಂಪೂರ್ಣ ಸಿದ್ಧತೆಯಲ್ಲಿ ಆರೋಗ್ಯ ಇಲಾಖೆ
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಒಸೆಲ್ಟಾಮಿವಿರ್ ಮಾತ್ರೆಗಳು, ಎನ್-95 ಮಾಸ್ಕ್ ಹಾಗೂ ಪಿಪಿಇ ಕಿಟ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ.
ಜ್ವರ ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವವರನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಲಾಗಿದೆ.
ಸೋಂಕು ಹರಡದಂತೆ ತಡೆಯಲು ಆಸ್ಪತ್ರೆಗಳಲ್ಲಿ ನೈರ್ಮಲ್ಯ ಹಾಗೂ ತಪಾಸಣಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.

ಸಾರ್ವಜನಿಕರಿಗೆ ಸರಳ ಆರೋಗ್ಯ ಸಲಹೆಗಳು
ಇನ್ಫ್ಲುಯೆಂಜಾ ಜ್ವರವು ಸಾಮಾನ್ಯ ಮುನ್ನೆಚ್ಚರಿಕೆಗಳಿಂದ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ. ಪ್ರತಿಯೊಬ್ಬರೂ ಈ ಕೆಳಗಿನ ಸರಳ ಅಭ್ಯಾಸಗಳನ್ನು ಪಾಲಿಸಲು ಕೋರಲಾಗಿದೆ:
ಶುಚಿತ್ವ ಕಾಪಾಡಿ: ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಕೈ/ಟಿಶ್ಯೂಯಿಂದ ಮುಚ್ಚಿಕೊಳ್ಳಿ.
ಕೈಗಳನ್ನು ತೊಳೆಯಿರಿ: ಆಗಾಗ್ಗೆ ಸೋಪು ಮತ್ತು ನೀರಿನಿಂದ ಕೈಗಳನ್ನು ಶುಚಿಗೊಳಿಸಿ.
ಬಿಸಿ ನೀರು ಸೇವಿಸಿ: ಕುಡಿಯಲು ಉಗುರುಬೆಚ್ಚಗಿನ ನೀರನ್ನು ಬಳಸಿ ಹಾಗೂ ಸಾಕಷ್ಟು ದ್ರವಾಹಾರ ಸೇವಿಸಿ.
ಸ್ವಯಂ ಆರೈಕೆ: ಜ್ವರ ಅಥವಾ ಶೀತದ ಲಕ್ಷಣಗಳು ಕಂಡುಬಂದರೆ 1-2 ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಿರಿ. ಸಾರ್ವಜನಿಕ ಸ್ಥಳಗಳಿಗೆ ಹೋಗಬೇಕಾದಲ್ಲಿ ಮಾಸ್ಕ್ ಧರಿಸಿ.
ಆರೋಗ್ಯ ಇಲಾಖೆಯು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಸಾರ್ವಜನಿಕರ ರಕ್ಷಣೆಗೆ ಸಂಪೂರ್ಣವಾಗಿ ಬದ್ಧವಾಗಿದೆ.



