August 24, 2026
Monday, August 24, 2026
spot_img

ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಪೂರ್ಣ: ಪಟ್ಟಿಯಿಂದ 1 ಕೋಟಿಗೂ ಅಧಿಕ ಮತದಾರರು ಹೊರಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ರಾಜ್ಯದಲ್ಲಿ ಜೂ.30ರಿಂದ ಆ.17ರವರೆಗೆ ನಡೆದ ಎಸ್ಐಆರ್ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದ್ದು, ಮೊದಲ ಕರಡು ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.


ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ, ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 5 ಕೋಟಿ 54 ಲಕ್ಷ 32 ಸಾವಿರದ 314 ಮತದಾರರಿದ್ದರು. ಇದರಲ್ಲಿ ಎಸ್ಐಆರ್ ನಂತರ, 4 ಕೋಟಿ 46 ಲಕ್ಷ 80 ಸಾವಿರದ 151 ಮತದಾರರು ಉಳಿದಿದ್ದಾರೆ. ಒಟ್ಟು 4 ಕೋಟಿ 46 ಲಕ್ಷ 35 ಸಾವಿರದ 975 ಮಂದಿಯ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು ಶೇಕಡಾ 80.52ರಷ್ಟು ಡಿಜಿಟಲೀಕರಣವಾಗಿದೆ. ಕರಡು ಪಟ್ಟಿಯಲ್ಲಿ 2 ಕೋಟಿ 22 ಲಕ್ಷ 1 ಸಾವಿರದ 727 ಪುರುಷ ಮತದಾರರು, 2 ಕೋಟಿ 24 ಲಕ್ಷ 75 ಸಾವಿರದ 553 ಮಹಿಳಾ ಮತದಾರರು ಹಾಗೂ 2 ಸಾವಿರದ 871 ತೃತೀಯ ಲಿಂಗಿ ಮತದಾರರು ಇದ್ದಾರೆ ಎಂದು ತಿಳಿಸಿದರು.

ಎನ್ಯುಮರೇಷನ್ ಫಾರ್ಮ್ ಸಲ್ಲಿಸದ 1 ಕೋಟಿ 7 ಲಕ್ಷ 96 ಸಾವಿರದ 339 ಮತದಾರರನ್ನು ASDDO ಪಟ್ಟಿಗೆ ಸೇರಿಸಲಾಗಿದೆ. ಅವರಲ್ಲಿ 65 ಲಕ್ಷ 45 ಸಾವಿರದ 679 ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 16 ಲಕ್ಷ 39 ಸಾವಿರದ 864 ಜನರು ಮೃತಪಟ್ಟಿದ್ದಾರೆ. 15 ಲಕ್ಷ 17 ಸಾವಿರದ 42 ಮಂದಿ ಗೈರಾದವರು, 7 ಲಕ್ಷ 9 ಸಾವಿರದ 870 ಜನರು, ಒಂದಕ್ಕಿಂತ ಹೆಚ್ಚು ಕಡೆ ಮತ ಹೊಂದಿದ್ದ ನಕಲಿ ಮತದಾರರು ಹಾಗೂ 3 ಲಕ್ಷ 83 ಸಾವಿರದ 884 ಮಂದಿ ಇತರೆ ವಿಭಾಗದವರು ಸೇರಿದ್ದಾರೆ ಎಂದರು.

ಇನ್ನು ಇಂದಿನಿಂದ (ಆ.24) ಸೆಪ್ಟೆಂಬರ್ 23ರವರೆಗೆ ಒಂದು ತಿಂಗಳ ಕಾಲ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !