ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಾದ್ಯಂತ ಶುಕ್ರವಾರ ಸುರಿದ ಸಿಡಿಲು ಸಹಿತ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಸಮೀಪದ ಮಿನೋಜಿಕಲ್ಲು ಬಳಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹೆದ್ದಾರಿಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದೆ.
ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಗ್ರಾಮೀಣ ಭಾಗಗಳಲ್ಲಿಯೂ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಈ ಭಾಗದಲ್ಲಿ ಶುಕ್ರವಾರ ಸಂಜೆ ಭಾರೀ ಗಾಳಿ ಸಹಿತ ಮಳೆ ಸುರಿದಿದ್ದು, ಗಾಳಿಯ ತೀವ್ರತೆಗೆ ಬೃಹತ್ ಮರವೊಂದು ಸೇರಿದಂತೆ ಐದಾರು ಮರಗಳು ಹೆದ್ದಾರಿಗೆ ಉರುಳಿವೆ. ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಇರದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಸಂಜೆ ಸುಮಾರು 4.30ರ ವೇಳೆಗೆ ಘಟನೆ ನಡೆದಿದ್ದು, ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸುದ್ದಿ ತಿಳಿದ ತಕ್ಷಣ ಮೆಸ್ಕಾಂ ಸಿಬ್ಬಂದಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಸ್ಥಳೀಯ ಪಂಚಾಯತ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಮರ ತೆರವು ಕಾರ್ಯಾಚರಣೆಯಲ್ಲಿ ಕೈಜೋಡಿಸಿದರು. ಸಂಜೆ ಆರು ಗಂಟೆಯ ಸುಮಾರಿಗೆ ವಾಹನ ಸಂಚಾರ ಪುನರಾರಂಭಗೊಂಡಿತು. ರಸ್ತೆ ಬಂದ್ ಆಗಿದ್ದರಿಂದ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬೀಸಿದ ಬಲವಾದ ಗಾಳಿಗೆ ಅಲ್ಲಲ್ಲಿ 16ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಪ್ರದೇಶಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಗಾಳಿ ಮಳೆಯಿಂದ ಮರಗಳು ಹಾಗೂ ಕೃಷಿಗೂ ಹಾನಿಯಾಗಿದೆ.



