ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಸ್ಟಿಂಗ್ ಆಪರೇಷನ್’ ವಿವಾದವು ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಲವು ಸಚಿವರನ್ನು ಸಿಲುಕಿಸಲು ಖಾಸಗಿ ತಂಡವೊಂದು ಸಂಚು ರೂಪಿಸಿದೆ ಎಂಬ ಆಡಳಿತ ಪಕ್ಷದ ಆರೋಪದ ಬೆನ್ನಲ್ಲೇ, ಈ ಇಡೀ ಹಗರಣದ ಸತ್ಯಾಸತ್ಯತೆ ಹೊರತರಲು CBI ತನಿಖೆಗೆ ಆಗ್ರಹಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಅಧಿಕೃತ ದೂರು ಸಲ್ಲಿಕೆಯಾಗಿದೆ.
ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ಈ ಕುರಿತು ರಾಜಭವನಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದು, ಸಚಿವರ ಕಚೇರಿಗಳ ರಹಸ್ಯ ಕಾರ್ಯಾಚರಣೆಯ ತನಿಖೆ ಸಿಬಿಐನಿಂದಲೇ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವ ವಿ. ಸೋಮಣ್ಣ ವ್ಯಂಗ್ಯ
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ ಅವರು, ನನಗೆ ಈ ಸ್ಟಿಂಗು, ಪಂಗು ಗೊತ್ತಿಲ್ಲ, ನಾನದನ್ನು ನೋಡಿಯೂ ಇಲ್ಲ. ರಾಜಕೀಯದಲ್ಲಿ ನನಗೆ 50 ವರ್ಷಗಳ ಸುದೀರ್ಘ ಅನುಭವವಿದೆ. ಮುಖ್ಯಮಂತ್ರಿಗಳಿಗಿಂತ ಮುಂಚೆಯೇ ನಾನು ರಾಜಕೀಯಕ್ಕೆ ಬಂದವನು. ಈ ಸ್ಟಿಂಗ್ ಸಂಸ್ಕೃತಿಯ ಸಂಸ್ಥಾಪಕರು, ಅದರ ಜನಕ-ಜನನಿ ಯಾರು ಎಂಬುದನ್ನು ಇದನ್ನು ಸೃಷ್ಟಿಸಿದವರಿಗೇ ಕೇಳಬೇಕು ಎಂದು ಲೇವಡಿ ಮಾಡಿದರು.
ಮುಂದುವರಿದು ಮಾತನಾಡಿದ ಅವರು, ಇಂತಹ ವಿಷಯಗಳಲ್ಲಿ ನಾನು ಕೇವಲ ‘ಎಲ್ ಬೋರ್ಡ್’. ಇಂತಹ ವಿಚಾರಗಳ ಬಗ್ಗೆ ಮಾತನಾಡಲು ನನಗೇನು ಅನುಭವವಿಲ್ಲ. ಇಲ್ಲದ ಸುಳ್ಳುಗಳನ್ನು ಸೃಷ್ಟಿಸಿ ಅದನ್ನು ಸತ್ಯ ಮಾಡಲು ಹೊರಟಿರುವುದು ಅತ್ಯಂತ ಪಾಪದ ಕೆಲಸ. ರಾಜ್ಯದ ಮುಖ್ಯಮಂತ್ರಿಗಳು 7 ಕೋಟಿ ಜನರನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಕಿಡಿಕಾರಿದರು.
ಇದನ್ನೂ ಓದಿ:
ಬರದ ಬಗ್ಗೆ ಗಮನ ಹರಿಸಿ
ರಾಜ್ಯದಲ್ಲಿ ತಲೆದೋರಿರುವ ಭೀಕರ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸೋಮಣ್ಣ, ಕರ್ನಾಟಕದಲ್ಲಿ ಇಂತಹ ಭೀಕರ ಬರಗಾಲ ಬಂದು ಬರೋಬ್ಬರಿ 42 ವರ್ಷಗಳೇ ಕಳೆದಿವೆ. ನಾವೆಲ್ಲರೂ ಒಟ್ಟಾಗಿ ಈ ಬರದ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ಎಂದು ಚರ್ಚಿಸುವುದನ್ನು ಬಿಟ್ಟು, ಸಚಿವರು ಕೆಲಸಕ್ಕೆ ಬಾರದ ವಿಷಯಗಳನ್ನು ಹಿಡಿದುಕೊಂಡು ಕೂತಿದ್ದಾರೆ ಎಂದು ಗುಡುಗಿದರು.



