ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಮೂವರು ಆರೋಪಿಗಳ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದೆ. ವರದಿಯಲ್ಲಿ ಮೂವರಿಗೂ ಗುಂಡೇಟಿನಿಂದ ಗಾಯಗಳಾಗಿರುವ ಬಗ್ಗೆ ವಿವರಗಳು ದಾಖಲಾಗಿವೆ.
ಮೃತ ಕುಮಾರ್ ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ, ಎದೆ ಭಾಗಕ್ಕೆ ಗುಂಡು ತಗುಲಿರುವುದು ಉಲ್ಲೇಖವಾಗಿದೆ. ಅವರ ಒಳ ಉಡುಪಿನಲ್ಲಿ ಹೆಡ್ಟಾರ್ಚ್, ಬೆಂಕಿ ಪೊಟ್ಟಣ ಹಾಗೂ ಬೀಡಿ ಪತ್ತೆಯಾಗಿರುವುದನ್ನೂ ವರದಿಯಲ್ಲಿ ದಾಖಲಿಸಲಾಗಿದೆ.
ಇನ್ನೊಬ್ಬ ಮೃತ ಆಂತೋಣಿಸ್ವಾಮಿ ಅವರ ಎದೆ ಮತ್ತು ಕುತ್ತಿಗೆ ಭಾಗಕ್ಕೆ ಗುಂಡುಗಳು ತಗುಲಿರುವುದು ಮರಣೋತ್ತರ ವರದಿಯಲ್ಲಿ ಉಲ್ಲೇಖವಾಗಿದೆ. ಅವರ ಒಳ ಉಡುಪಿನಲ್ಲಿ ಅಲ್ಯೂಮಿನಿಯಂನ 9 ಪ್ರೈಮರ್ಗಳು ಪತ್ತೆಯಾಗಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:
ಮೂರನೇ ಮೃತ ಪೀಟರ್ ಅವರಿಗೂ ಗುಂಡೇಟಾಗಿದ್ದು, ಎದೆ, ಕುತ್ತಿಗೆ ಹಾಗೂ ತೊಡೆ ಭಾಗಕ್ಕೆ ಗುಂಡುಗಳು ತಗುಲಿರುವುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ದಾಖಲಾಗಿದೆ.
ಈ ನಡುವೆ, ಹನೂರು ಶೂಟೌಟ್ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ 12 ಮಂದಿ ಅರಣ್ಯ ಸಿಬ್ಬಂದಿಯ ಹೇಳಿಕೆಗಳನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ಪ್ರಕರಣದಲ್ಲಿ ಆರೋಪಿಯಾಗಿರುವ ಮರಿಯಮಂಗಲದ ಮಹಿಮಾದಾಸ್ ಅವರ ಹೇಳಿಕೆಯನ್ನೂ ತನಿಖಾಧಿಕಾರಿಗಳು ಪಡೆದಿದ್ದಾರೆ.
ಮೂವರ ಸಾವಿಗೆ ಕಾರಣವಾದ ಗುಂಡಿನ ದಾಳಿ, ಘಟನೆಯ ಸಂದರ್ಭದಲ್ಲಿನ ಪರಿಸ್ಥಿತಿ ಹಾಗೂ ಶೂಟೌಟ್ಗೆ ಕಾರಣವಾದ ಬೆಳವಣಿಗೆಗಳ ಕುರಿತು ತನಿಖೆ ಮುಂದುವರಿದಿದ್ದು, ತನಿಖಾಧಿಕಾರಿಗಳು ವಿವಿಧ ಸಾಕ್ಷ್ಯಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದಾರೆ.



