ಹೊಸದಿಗಂತ ದಾವಣಗೆರೆ:
ಭದ್ರಾ ಡ್ಯಾಂ ನಿಂದ ಮಳೆಗಾಲದ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ ಭಾರತೀಯ ರೈತ ಒಕ್ಕೂಟ ಕರೆ ನೀಡಿದ್ದ ದಾವಣಗೆರೆ ಬಂದ್ ಗೆ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಜಯದೇವ ವೃತ್ತದಲ್ಲಿ ತುಂತುರು ಮಳೆಯ ಮಧ್ಯೆಯೂ ಒಕ್ಕೂಟದ ಮುಖಂಡರಾದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಅಧ್ಯಕ್ಷ ಶಾಮನೂರು ಎಚ್.ಆರ್.ಲಿಂಗರಾಜ, ಚಂದ್ರಶೇಖರ ಪೂಜಾರ, ಲೋಕಿಕೆರೆ ನಾಗರಾಜ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಭದ್ರಾ ಡ್ಯಾಂನಲ್ಲಿ ಸದ್ಯಕ್ಕೆ 175 ಅಡಿ ನೀರು ಸಂಗ್ರಹವಿದೆ. ಬಲದಂಡೆ ನಾಲೆಗೆ ನೀರು ಮೊದಲು ನೀರು ಹರಿಸುವ ಕೆಲಸವಾಗಲಿ. ಹಿಂದೆಯೂ ಭದ್ರಾ ಡ್ಯಾಂನಲ್ಲಿ 150 ಅಡಿ ನೀರಿದ್ದಾಗಲೇ ನಾಲೆಗೆ ನೀರು ಹರಿಸಿದ ನಿದರ್ಶನಗಳಿವೆ. ಸಚಿವರು, ಜನ ಪ್ರತಿನಿಧಿಗಳು, ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈಗ ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸುವಂತಹ ಪರಿಸ್ಥಿತಿ ಬಂದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಯದೇವ ವೃತ್ತದಲ್ಲಿ ಪ್ರತಿಭಟಿಸುತ್ತಿದ್ದ ಚಂದ್ರಶೇಖರ ಪೂಜಾರ ಸೇರಿದಂತೆ 50ಕ್ಕೂ ಹೆಚ್ಚು ಮುಖಂಡರು, ರೈತರನ್ನು ಪೊಲೀಸಲು ವಶಕ್ಕೆ ಪಡೆದರು. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರ ಹಾಕಿದರು. ಅತ್ತ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಸ್ತೆ ತಡೆಗೆ ಮುಂದಾಗಿದ್ದ ರೈತ ಮುಖಂಡರಾದ ಬೆಳವನೂರು ಬಿ.ನಾಗೇಶ್ವರರಾವ್, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಸೇರಿದಂತೆ 20ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಕೆಲ ಹೊತ್ತಿನ ನಂತರ ಬಿಡುಗಡೆ ಮಾಡಿದರು.



