ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಸಿರಿನಿಂದ ಆವೃತವಾದ ಬೆಟ್ಟಗಳು, ದಟ್ಟ ಮಂಜು, ತಿರುವುಗಳಿಂದ ಕೂಡಿದ ರೈಲು ಹಳಿ… ಇದರ ನಡುವೆ ಕಿತ್ತಳೆ-ಬಿಳಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ಸಾಗುತ್ತಿರುವ ಅದ್ಭುತ ದೃಶ್ಯವೊಂದು ಇದೀಗ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮೇಲಿನಿಂದ ನೋಡಿದಾಗ ರೈಲು ‘ಕಿತ್ತಳೆ ಬಣ್ಣದ ಹಾವಿನಂತೆ’ ಕಾಣಿಸುತ್ತಿದೆ.
ಈ ಅದ್ಭುತ ಡ್ರೋನ್ ದೃಶ್ಯವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ “New age trains! Make more in India” ಎಂಬ ಸಂದೇಶದೊಂದಿಗೆ ಅವರು ವಿಡಿಯೋ ಹಂಚಿಕೊಂಡಿದ್ದಾರೆ.
ಮಂಜು, ಬೆಟ್ಟ, ತಿರುವುಗಳ ನಡುವೆ ಸೆಮಿ-ಹೈ-ಸ್ಪೀಡ್ ರೈಲು
ವಿಡಿಯೋದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ದಟ್ಟ ಹಸಿರು ಕಾಡುಗಳ ನಡುವೆ ಸಾಗುವುದು, ಬೆಟ್ಟದ ಇಳಿಜಾರುಗಳನ್ನು ಸುತ್ತಿಕೊಂಡು ಹೋಗುವುದು ಮತ್ತು ಮಂಜಿನ ಪದರವನ್ನು ಸೀಳಿಕೊಂಡು ಹೊರಬರುವುದು ಕಂಡುಬರುತ್ತದೆ. ಈ ದೃಶ್ಯವು ಕರ್ನಾಟಕದ ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ನಡೆದ ಇತ್ತೀಚಿನ ಟ್ರಯಲ್ ರನ್‌ಗೆ ಸಂಬಂಧಿಸಿದೆ.
ಪಶ್ಚಿಮ ಘಟ್ಟದ ಈ ರೈಲು ಮಾರ್ಗದಲ್ಲಿ ಬೆಟ್ಟ-ಕಣಿವೆಗಳ ನಡುವೆ ರೈಲು ಸಂಚಾರ ನಡೆಸುವುದು ಹೆಚ್ಚು ಸವಾಲಿನದ್ದು. ಈ ವಿಭಾಗದಲ್ಲಿ 57 ಸುರಂಗಗಳು, 258 ಸೇತುವೆಗಳು ಹಾಗೂ 108 ತೀಕ್ಷ್ಣ ತಿರುವುಗಳು ಇದೆ. ಇಂತಹ ಭೌಗೋಳಿಕ ಪರಿಸ್ಥಿತಿಯ ನಡುವೆಯೇ ವಂದೇ ಭಾರತ್‌ನ ಸಂಚಾರ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದೆ. ವಂದೇ ಭಾರತ್‌ನಂತಹ ಆಧುನಿಕ ಸೆಮಿ-ಹೈ-ಸ್ಪೀಡ್ ರೈಲು ದಟ್ಟ ಕಾಡು, ಬೆಟ್ಟ ಮತ್ತು ಮಂಜಿನ ನಡುವೆ ಸಾಗುತ್ತಿರುವ ದೃಶ್ಯವು ರೈಲ್ವೆ ತಂತ್ರಜ್ಞಾನ ಮತ್ತು ಪಶ್ಚಿಮ ಘಟ್ಟದ ನೈಸರ್ಗಿಕ ಸೌಂದರ್ಯವನ್ನು ಒಂದೇ ಫ್ರೇಮ್‌ನಲ್ಲಿ ತೋರಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ
ರೈಲಿನ ದೃಶ್ಯಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯವನ್ನು ಹೊಗಳಿದ್ದರೆ, ಇನ್ನು ಕೆಲವರು ಇಂತಹ ಕಠಿಣ ಭೂಪ್ರದೇಶದಲ್ಲಿ ಆಧುನಿಕ ರೈಲು ಸಂಚಾರ ನಡೆಸುತ್ತಿರುವುದನ್ನು ಭಾರತೀಯ ರೈಲ್ವೆಯ ಎಂಜಿನಿಯರಿಂಗ್ ಸಾಮರ್ಥ್ಯದ ಉದಾಹರಣೆ ಎಂದು ಬಣ್ಣಿಸಿದ್ದಾರೆ. ಮಂಜಿನ ನಡುವೆ ಕೆಲ ಕ್ಷಣ ರೈಲು ಕಾಣಿಸಿಕೊಂಡು ಮತ್ತೆ ಹಸಿರು ಬೆಟ್ಟಗಳ ಹಿಂದೆ ಮರೆಯಾಗುವ ದೃಶ್ಯವೇ ಈ ವಿಡಿಯೋದ ಪ್ರಮುಖ ಆಕರ್ಷಣೆಯಾಗಿದೆ.



