ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸಲು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಕೇಂದ್ರ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ದೇಶದ ಮೊದಲ ಭಯೋತ್ಪಾದನಾ ನಿಗ್ರಹ ನೀತಿಯಾದ ‘ಪ್ರಹಾರ್’ ಅನ್ನು ಯಶಸ್ವಿಯಾಗಿ ಜಾರಿಗೊಳಿಸಲು ಭದ್ರತಾ ಪಡೆಗಳಿಗೆ ತರಬೇತಿ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ.

ನವದೆಹಲಿಯಲ್ಲಿ ಆರಂಭವಾದ ಎರಡು ದಿನಗಳ ಉನ್ನತ ಮಟ್ಟದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಮಹತ್ವದ ಸಮ್ಮೇಳನದಲ್ಲಿ ದೇಶದ ವಿವಿಧ ಭದ್ರತಾ ಪಡೆಗಳು, ತನಿಖಾ ಏಜೆನ್ಸಿಗಳು ಮತ್ತು ಪೊಲೀಸ್ ಇಲಾಖೆಯ 850 ಕ್ಕೂ ಹೆಚ್ಚು ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ವಿದೇಶಿ ಸಂಚುಕೋರರಿಗೆ ಶಾಕ್
ಗಡಿಯಾಚೆಗಿನ ಲಿಂಕ್‌ಗಳನ್ನು ಹೊಂದಿರುವ ಭಯೋತ್ಪಾದನಾ ಪ್ರಕರಣಗಳ ತನಿಖೆ ಮತ್ತು ಕಾನೂನು ಪ್ರಕ್ರಿಯೆಯನ್ನು ವೇಗಗೊಳಿಸಲು ಗೃಹ ಸಚಿವರು ಸೂಚಿಸಿದರು. ವಿದೇಶಗಳಿಗೆ ಓಡಿಹೋಗಿ ತಲೆಮರೆಸಿಕೊಂಡಿರುವ ಭಾರತದ ಅಪರಾಧಿಗಳನ್ನು ತಕ್ಷಣವೇ ದೇಶಕ್ಕೆ ಮರಳಿ ತರಲು ಕ್ರಮ ಕೈಗೊಳ್ಳಬೇಕು ಎಂದರು. ಅಷ್ಟೇ ಅಲ್ಲದೆ, ವಿದೇಶಿ ನೆಲದಲ್ಲಿ ಕುಳಿತು ಭಾರತದ ವಿರುದ್ಧ ಸಂಚು ರೂಪಿಸುವ ಮಾಸ್ಟರ್‌ಮೈಂಡ್‌ಗಳನ್ನು ಶಿಕ್ಷಿಸಲು ಕಾನೂನಿನ ಪ್ರಕಾರ ‘ಆರೋಪಿಯ ಗೈರುಹಾಜರಿಯಲ್ಲಿ ವಿಚಾರಣೆ’ನಡೆಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಒತ್ತಿಹೇಳಿದರು.
ಇದನ್ನೂ ಓದಿ:
ಭದ್ರತೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ
ಆಧುನಿಕ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮಲ್ಟಿ-ಏಜೆನ್ಸಿ ಸೆಂಟರ್ (MAC) ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಗುಪ್ತಚರ ಮಾಹಿತಿಯನ್ನು ವಿಶ್ಲೇಷಿಸಲು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನು ಬಳಸಬೇಕು. ಇದರ ಮೂಲಕ ಕಾರ್ಯಾಚರಣೆಯ ಪ್ರಮಾಣಿತ ಕಾರ್ಯವಿಧಾನಗಳನ್ನು ಸಿದ್ಧಪಡಿಸಲು ತಿಳಿಸಿದರು. ದೇಶದೊಳಗೆ ನಡೆಯುವ ಅಕ್ರಮ ನುಸುಳುವಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಯುಎಪಿಎ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ಪೊಲೀಸರು ಸಮಗ್ರವಾಗಿ ತನಿಖೆ ಮಾಡಲು ಸೂಚಿಸಿದರು.

ಸಮ್ಮೇಳನದ ಪ್ರಮುಖ ಚರ್ಚಾ ವಿಷಯಗಳು
ಮೊದಲ ದಿನದ ಸಮ್ಮೇಳನದಲ್ಲಿ ಸೈಬರ್ ಅಪರಾಧ ತಡೆಗೆ ಸೂಕ್ತ ನೀತಿ ರೂಪಿಸುವುದು, ಮಾದಕ ದ್ರವ್ಯ ನಿಯಂತ್ರಣ, ಅಕ್ರಮ ವಲಸಿಗರ ಪತ್ತೆ ಮತ್ತು ಪಾಕಿಸ್ತಾನದ ಪರೋಕ್ಷ ಯುದ್ಧವನ್ನು ಎದುರಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಸಮ್ಮೇಳನಕ್ಕೂ ಮುನ್ನ ಅಮಿತ್ ಶಾ ಅವರು ದೇಶದ ರಕ್ಷಣೆಗಾಗಿ ಸುಪ್ರೀಂ ಬಲಿದಾನ ನೀಡಿದ ಹುತಾತ್ಮ ಐಬಿ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು.



