ಪಾಸ್ತಾ ತಿನ್ಬೇಕು ಆದರೆ ಹೆಚ್ಚು ತರಕಾರಿಗಳನ್ನೂ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಅನ್ನೋ ಯೋಚನೆ ಇರೋರಿಗೆ ಈ ಗ್ರೀನ್ ಪಾಸ್ತಾ ಹೇಳಿ ಮಾಡಿಸಿದ್ದು. ಪಾಲಕ್ ಸೊಪ್ಪಿನಿಂದ ತಯಾರಿಸುವ ಹಸಿರು ಸಾಸ್ ಪಾಸ್ತಾಗೆ ಉತ್ತಮ ರುಚಿ ನೀಡುವುದರ ಜೊತೆಗೆ ಊಟಕ್ಕೆ ಪೌಷ್ಟಿಕಾಂಶವನ್ನೂ ಸೇರಿಸುತ್ತದೆ.
ಬೇಕಾಗುವ ಪದಾರ್ಥಗಳು
ಪಾಸ್ತಾ – 1 ಕಪ್
ಪಾಲಕ್ ಸೊಪ್ಪು – 2 ಕಪ್
ಬೆಳ್ಳುಳ್ಳಿ – 3–4 ಎಸಳು
ಆಲಿವ್ ಎಣ್ಣೆ – 1–2 ಟೀ ಸ್ಪೂನ್
ಚೀಸ್ – 2 ಟೇಬಲ್ ಸ್ಪೂನ್
ನಿಂಬೆ ರಸ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ½ ಟೀ ಸ್ಪೂನ್
ಚಿಲ್ಲಿ ಫ್ಲೇಕ್ಸ್ – ಸ್ವಲ್ಪ
ಪಾಸ್ತಾ ಬೇಯಿಸಿದ ನೀರು – ಅಗತ್ಯವಿದ್ದಷ್ಟು
ಮಾಡುವ ವಿಧಾನ
ಮೊದಲು ಪಾತ್ರೆಯಲ್ಲಿ ಸಾಕಷ್ಟು ನೀರು ಕುದಿಸಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ. ಪಾಸ್ತಾ ಸೇರಿಸಿ ಪ್ಯಾಕೆಟ್ನಲ್ಲಿ ಸೂಚಿಸಿರುವ ಸಮಯದಂತೆ ಬೇಯಿಸಿಕೊಳ್ಳಿ. ಪಾಸ್ತಾ ಸಂಪೂರ್ಣ ಮೆತ್ತಗಾಗದೆ ಸ್ವಲ್ಪ ಗಟ್ಟಿಯಾಗಿರುವಂತೆ ಬೇಯಿಸಿದರೆ ರುಚಿಯಾಗಿರುತ್ತದೆ. ನಂತರ ಸ್ವಲ್ಪ ಪಾಸ್ತಾ ನೀರನ್ನು ತೆಗೆದಿಟ್ಟುಕೊಂಡು ಪಾಸ್ತಾವನ್ನು ಸೋಸಿ.
ಪಾಲಕ್ ಸೊಪ್ಪನ್ನು ಬಿಸಿ ನೀರಿನಲ್ಲಿ ಸುಮಾರು 30–40 ಸೆಕೆಂಡ್ಗಳ ಕಾಲ ಬ್ಲ್ಯಾಂಚ್ ಮಾಡಿ ತಕ್ಷಣ ತಣ್ಣೀರಿನಲ್ಲಿ ಹಾಕಿ. ನಂತರ ಪಾಲಕ್, ಬೆಳ್ಳುಳ್ಳಿ, ಚೀಸ್, ನಿಂಬೆ ರಸ, ಸ್ವಲ್ಪ ಉಪ್ಪು ಮತ್ತು ಆಲಿವ್ ಎಣ್ಣೆಯನ್ನು ಮಿಕ್ಸಿಗೆ ಹಾಕಿ ನಯವಾದ ಪೇಸ್ಟ್ ಮಾಡಿಕೊಳ್ಳಿ.
ಪ್ಯಾನ್ಗೆ ಸ್ವಲ್ಪ ಆಲಿವ್ ಎಣ್ಣೆ ಹಾಕಿ ಸಿದ್ಧಪಡಿಸಿದ ಹಸಿರು ಸಾಸ್ ಸೇರಿಸಿ ಕಡಿಮೆ ಉರಿಯಲ್ಲಿ ಒಂದು ನಿಮಿಷ ಬಿಸಿ ಮಾಡಿ. ನಂತರ ಬೇಯಿಸಿದ ಪಾಸ್ತಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸಾಸ್ ಗಟ್ಟಿಯಾಗಿದ್ದರೆ ತೆಗೆದಿಟ್ಟಿದ್ದ ಪಾಸ್ತಾ ನೀರನ್ನು 1–2 ಚಮಚ ಸೇರಿಸಿ ಅಗತ್ಯವಿರುವಷ್ಟು ಸಾಸ್ನ ದಪ್ಪವನ್ನು ಹೊಂದಿಸಿಕೊಳ್ಳಿ.
ಮೇಲೆ ಸ್ವಲ್ಪ ಕರಿಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್ ಮತ್ತು ತುರಿದ ಚೀಸ್ ಹಾಕಿ ಬಿಸಿಯಾಗಿರುವಾಗಲೇ ಸವಿಯಿರಿ.
ಇನ್ನಷ್ಟು ಆರೋಗ್ಯಕರವಾಗಿಸಲು ಸಾಸ್ಗೆ ಬ್ರೊಕೊಲಿ, ಬಟಾಣಿ ಅಥವಾ ಕ್ಯಾಪ್ಸಿಕಂನಂತಹ ತರಕಾರಿಗಳನ್ನು ಸೇರಿಸಬಹುದು.



