August 25, 2026
Tuesday, August 25, 2026
spot_img

ವಿಚಾರಣಾಧೀನ ಕೈದಿಯನ್ನು ಆಸ್ಪತ್ರೆಗೆ ದಾಖಲಿಸಿದ ಪ್ರಕರಣ: ಜೈಲು ಅಧೀಕ್ಷಕರ ವಿರುದ್ಧ ತನಿಖೆಗೆ ಸೂಚನೆ

ಹೊಸದಿಗಂತ ವರದಿ ಮಂಡ್ಯ:

ವಿಚಾರಣಾಧೀನ ಕೈದಿಯನ್ನು ಆಸ್ಪತ್ರೆಗೆ ದಾಖಲಿಸಿದ ವಿಷಯವನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ತಿಳಿಸದೆ ಕರ್ತವ್ಯ ಲೋಪವೆಸಗಿರುವ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ಅಲೋಕ್‌ಕುಮಾರ್ ದಕ್ಷಿಣ ವಲಯ ಡಿಐಜಿಗೆ ಸೂಚಿಸಿದ್ದಾರೆ.

ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಲೋಕ್‌ಕುಮಾರ್ ಅವರು, ವಿಚಾರಣಾಧೀನ ಕೈದಿ ಶ್ರೀರಂಗಪಟ್ಟಣದ ಎಡಿಎಲ್‌ಆರ್ ಮಹಮದ್ ಹುಸೇನ್ ಅವರನ್ನು ಬೆನ್ನು ನೋವಿನ ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸದೆ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖಾ ತನಿಖೆ ನಡೆಸಿ, ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಐಜಿ ದಿವ್ಯಶ್ರೀ ಅವರಿಗೆ ಸೂಚಿಸಿದ್ದಾರೆ.

ಬೆನ್ನು ನೋವಿನ ದೂರಿನ ಹಿನ್ನೆಲೆಯಲ್ಲಿ ಕಾರಾಗೃಹ ವೈದ್ಯರ ಸಲಹೆಯಂತೆ ಕೈದಿ ಹುಸೇನ್ ಅವರನ್ನು ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿನ ಮೂಳೆ ರೋಗ ತಜ್ಞರ ಸಲಹೆ ಮೇರೆಗೆ ಅವರನ್ನು ತಾತ್ಕಾಲಿಕವಾಗಿ ಜೈಲು ವಾರ್ಡ್‌ಗೆ ದಾಖಲಿಸಲಾಗಿತ್ತು. ಕೈದಿಯ ಕಾವಲಿಗೆ ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕರ್ತವ್ಯದಲ್ಲಿ ಲೋಪವೆಸಗಿದ ಬೆಂಗಾವಲು ತಂಡದ ಸಿಬ್ಬಂದಿ ವಿರುದ್ಧ ಮಂಡ್ಯ ಜಿಲ್ಲಾ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

ಮಿಮ್ಸ್ ಆಸ್ಪತ್ರೆಗೆ ಭೇಟಿ

ಬಳಿಕ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ಅಲೋಕ್‌ಕುಮಾರ್ ಅವರು ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಕೈದಿ ಮಹಮದ್ ಹುಸೇನ್ ಅವರ ಆರೋಗ್ಯ, ಭದ್ರತೆ ಹಾಗೂ ಇತರ ವಿಚಾರಗಳ ಕುರಿತು ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಅವರಿಂದ ಮಾಹಿತಿ ಪಡೆದರು. ಇದೇ ವೇಳೆ ಕೈದಿಗಳಿಗಾಗಿ ಪ್ರತ್ಯೇಕ ಜೈಲು ವಾರ್ಡ್ ನಿರ್ಮಿಸುವಂತೆ ಸಲಹೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !