August 25, 2026
Tuesday, August 25, 2026
spot_img

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ: 6ನೇ ಗ್ಯಾರಂಟಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹ

ಹೊಸದಿಗಂತ ವರದಿ ಚಿತ್ರದುರ್ಗ:

ಗೌರವಧನ ಹೆಚ್ಚಳದ 6ನೇ ಗ್ಯಾರಂಟಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ (ಎಐಟಿಯುಸಿ ಸಂಯೋಜಿತ) ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರದ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15,000 ಸಾವಿರ ರೂ ಹಾಗೂ ಸಹಾಯಕಿಯರಿಗೆ 10,000 ಸಾವಿರ ರೂ ಗೌರವಧನ ಹೆಚ್ಚಳ ಜಾರಿಗೊಳಿಸಬೇಕು. 2011ರಿಂದ ನಿವೃತ್ತರಾಗಿರುವ ವಯೋವೃದ್ಧ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು. ಈಗಾಗಲೇ ಸ್ವಯಂ ನಿವೃತ್ತಿ ಹೊಂದಿರುವವರಿಗೂ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರಗಳ ಕೆಲಸಗಳ ಜತೆಗೆ ಹೆಚ್ಚುವರಿ ಜವಾಬ್ದಾರಿಯಾಗಿ ಬಿಎಲ್‌ಒ ಕೆಲಸವನ್ನು ಬಲವಂತವಾಗಿ ವಹಿಸುವುದನ್ನು ನಿಲ್ಲಿಸಬೇಕು. ಬಿಎಲ್‌ಒ ಜವಾಬ್ದಾರಿ ನಿರಾಕರಿಸುವ ಕಾರ್ಯಕರ್ತೆಯರ ವಿರುದ್ಧ ಕ್ರಮ ಕೈಗೊಂಡು ಅಮಾನತುಗೊಳಿಸುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು. ಎಸ್‌ಐಆರ್‌ ಸಮೀಕ್ಷೆಯಲ್ಲಿ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಸಮೀಕ್ಷೆ ನಡೆಸುವವರಿಗೆ ಗೌರವಧನ ಹೆಚ್ಚಿಸಿ, ಸಮೀಕ್ಷೆ ಪೂರ್ಣಗೊಳ್ಳುವ ಮೊದಲೇ ಹಣವನ್ನು ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.

ಎಸ್‌ಐಆರ್ ಸಮೀಕ್ಷೆಯಿಂದ ಕೈಬಿಡಲು ಮನವಿ

ಸಮೀಕ್ಷೆ ಸಂದರ್ಭದಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವವರಿಗೆ ವೈದ್ಯಕೀಯ ವೆಚ್ಚ ಭರಿಸಬೇಕು. ಮೃತಪಟ್ಟವರಿಗೆ 30 ಲಕ್ಷ ರೂ ಪರಿಹಾರ ನೀಡಬೇಕು. ಜಾತಿ ಪ್ರಮಾಣಪತ್ರವನ್ನು ಮನೆ ಮನೆಗೆ ವಿತರಿಸುವ ಕಾರ್ಯ ಹಾಗೂ ಗೃಹಲಕ್ಷ್ಮಿ ಸಮೀಕ್ಷೆಯಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈಬಿಡಬೇಕು ಎಂದು ಮನವಿ ಮಾಡಿದರು. ವರ್ಷಪೂರ್ತಿ ವಿವಿಧ ಸಮೀಕ್ಷೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನೇ ನಿಯೋಜಿಸುತ್ತಿರುವುದರಿಂದ ಅಂಗನವಾಡಿ ಕೇಂದ್ರಗಳ ಮೂಲ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಇದರಿಂದ 3ರಿಂದ 5 ವರ್ಷದ ಮಕ್ಕಳ ಶಾಲಾ ಪೂರ್ವ ಶಿಕ್ಷಣಕ್ಕೂ ಅಡಚಣೆಯಾಗುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:

ಅಂಗನವಾಡಿಗಳಲ್ಲೇ ಎಲ್‌ಕೆಜಿ-ಯುಕೆಜಿ ಆರಂಭಕ್ಕೆ ಆಗ್ರಹ

ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಲು ಅವಕಾಶ ನೀಡುತ್ತಿರುವುದರಿಂದ ಅಂಗನವಾಡಿಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಿ ಅಂಗನವಾಡಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಈ ಕುರಿತು ಎರಡು ಇಲಾಖೆಗಳ ಅಧಿಕಾರಿಗಳು ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.

ಪೌಷ್ಟಿಕ ಆಹಾರ ವೆಚ್ಚ ಹೆಚ್ಚಳಕ್ಕೆ ಒತ್ತಾಯ

ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರಿಸಲು ನೀಡುತ್ತಿರುವ ತರಕಾರಿ ವೆಚ್ಚವನ್ನು ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸಬೇಕು. ಕಾರ್ಯಕರ್ತೆಯರು ಮತ್ತು ಸಹಾಯಕಿಯರ 30 ರೂ ಡಿಎಯನ್ನು ಹೆಚ್ಚಿಸಿ ನಗರ ಪ್ರದೇಶದಲ್ಲಿ ಕೆಲಸ ಮಾಡುವವರಿಗೂ ಅನ್ವಯಿಸಬೇಕು. ಮಾತೃವಂದನಾ ಹಾಗೂ ಭಾಗ್ಯಲಕ್ಷ್ಮಿ ಪ್ರೋತ್ಸಾಹಧನವನ್ನು ಕಾರ್ಯಕರ್ತೆಯರಿಗೆ ಬಿಡುಗಡೆ ಮಾಡಬೇಕು. ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ ಅಗತ್ಯ ಅನುದಾನ ನೀಡಬೇಕು ಮತ್ತು ಬಾಡಿಗೆ ಕಟ್ಟಡಗಳ ಬಾಡಿಗೆ ಮೊತ್ತವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಟಿ.ಆರ್.ಉಮಾಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‌ಬಾಬು, ಜಿಲ್ಲಾಧ್ಯಕ್ಷ ಬವರಾಜಪ್ಪ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾಧ್ಯಕ್ಷೆ ಎಸ್.ಭಾಗ್ಯಮ್ಮ, ಪ್ರಧಾನ ಕಾರ್ಯದರ್ಶಿ ಸಾವಿತ್ರಮ್ಮ, ಸಂಚಾಲಕರಾದ ರಾಧಮ್ಮ, ಖಜಾಂಚಿ ವಿನೋದಮ್ಮ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !