ಹೊಸದಿಗಂತ ಉಳ್ಳಾಲ:
ಸಾಂಬಾರಿನಲ್ಲಿ ಜಿರಳೆಯಿದೆಯೆಂದು ಗ್ರಾಹಕನೋರ್ವನು ದೂರು ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್, ತೊಕ್ಕೊಟ್ಟುವಿನ ಹೊಟೇಲೊಂದಕ್ಕೆ ದಿಢೀರ್ ದಾಳಿ ನಡೆಸಿ ಅಡುಗೆ ಕೋಣೆ ತಪಾಸಣೆ ನಡೆಸಿದ್ದು, ಶುಚಿತ್ವ ಕಾಪಾಡದ ಮಾಲಕರಿಗೆ ನೋಟೀಸು ನೀಡಿ, ಎಡಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
ಇತ್ತೀಚಿಗೆ ಮಂಗಳೂರಿನ ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ ಹಾಗೂ ಕೆಲವು ಪ್ರಮುಖ ರೆಸ್ಟೋರೆಂಟ್‌ಗಳ ಮೇಲೆ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ಡಾ. ಪ್ರವೀಣ್ ಕುಮಾರ್ ನೇತೃತ್ವದ ತಂಡ ನಡೆಸಿದ ದಾಳಿಗಳು ಬಹಳಷ್ಟು ಸುದ್ದಿಯಾಗಿತ್ತು. ಇದೀಗ ಮಂಗಳವಾರದ ಈದ್ ಮಿಲಾದ್ ರಜಾ ದಿನದಲ್ಲೂ ಅವರು ಆಹಾರ ಇಲಾಖೆಯ ಕಾರು ಚಾಲಕನೊಂದಿಗೆ ತೊಕ್ಕೊಟ್ಟಿನ ವೃಂದಾವನ ಹೊಟೇಲ್ ಮೇಲೆ ಧಿಡೀರನೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಸಾಂಬಾರಿನಲ್ಲಿ ಜಿರಳೆ ಇರುವ ದೂರಿಗೆ ಸ್ಥಳೀಯಾಡಳಿತದ ಆರೋಗ್ಯ ಅಧಿಕಾರಿಗಳನ್ನ ನಿರ್ಲಕ್ಷಿಸಿ ಜಿಲ್ಲಾ ಮಟ್ಟದ ಅಧಿಕಾರಿಯೇ ಶೋಧ ಕಾರ್ಯಕ್ಕೆ ಬಂದಿರುವುದು ಸ್ಥಳೀಯ ವರ್ತಕರನ್ನ ಬೆರಗುಗೊಳಿಸಿದೆ.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಡಾ. ಪ್ರವೀಣ್ ಕುಮಾರ್, ಗ್ರಾಹಕನೋರ್ವನು ಸಾಂಬಾರಿನಲ್ಲಿ ಜಿರಳೆಯಿದೆಯೆಂದು ದೂರು ನೀಡಿರುವ ನಿಟ್ಟಿನಲ್ಲಿ ದಾಳಿಯನ್ನ ನಡೆಸಲಾಗಿದೆ. ಹೊಟೇಲಿನ ಅಡುಗೆ ಕೋಣೆಯಲ್ಲಿ ಆಹಾರ ದಾಸ್ತಾನು ಮಾಡಲು ಪ್ರತ್ಯೇಕ ಕೊಠಡಿಯಿಲ್ಲದೆ, ಎಲ್ಲೆಂದರಲ್ಲಿ ಆಹಾರ ಪದಾರ್ಥಗಳನ್ನ ರಾಶಿ ಹಾಕಲಾಗಿತ್ತು.
ಎಲ್ಲಾ ಆಹಾರ ಪದಾರ್ಥಗಳನ್ನ ತೆರವುಗೊಳಿಸಿ ಅಡುಗೆ ಕೋಣೆಯನ್ನ ತೊಳೆಸಿ ಶುಚಿಗೊಳಿಸಲಾಗಿದೆ. ಆಹಾರ ಪದಾರ್ಥಗಳನ್ನ ಪ್ರತ್ಯೇಕವಾಗಿ ಜೋಡಿಸಿಡಲು ಹೊಟೇಲು ಮಾಲಕರಿಗೆ ನಿರ್ದೇಶನ ನೀಡಲಾಗಿದೆ. ಶುಚಿತ್ವ ಕಾಪಾಡದ ನಿಟ್ಟಿನಲ್ಲಿ ಹೊಟೇಲು ಮಾಲಕರಿಗೆ ನೋಟೀಸು ನೀಡಿ, ಎಡಿಸಿ (ಅಪರ ಜಿಲ್ಲಾಧಿಕಾರಿ) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸೋದಾಗಿ ತಿಳಿಸಿದ್ದಾರೆ.

ತೊಕ್ಕೊಟ್ಟಿನಲ್ಲಿ ಯಾವುದೇ ಹೊಟೇಲ್ ಗಳಿಗೆ ದಾಳಿ ನಡೆಸಿದರೂ ಇಂತಹ ದೃಶ್ಯಗಳು ಕಾಣ ಸಿಗುವುದು ಸರ್ವೇ ಸಾಮಾನ್ಯವಾಗಿದೆ. ತಿಂಗಳಿಗೊಮ್ಮೆ ಹೊಟೇಲ್, ಆಹಾರ ಮಾರಾಟ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಆಹಾರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡಲ್ಲಿ, ಅಪರೂಪಕ್ಕೊಮ್ಮೆ ಇಂತಹ ಭಾರೀ ಕಾರ್ಯಾಚರಣೆಯ ಪ್ರಹಸನಗಳನ್ನ ನಡೆಸುವ ಅಗತ್ಯವೇ ಇಲ್ಲವೆಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.



