ಹೊಸದಿಗಂತ ವರದಿ ಬೆಳಗಾವಿ:
ಸಾಲದ ಬಾಧೆಯಿಂದ ಜೀವನ ನಡೆಸಲಾಗದೆ ನೇಕಾರ ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಕರುಣಾಜನಕ ಘಟನೆ ಬೆಳಗಾವಿ ನಗರದ ವಡಗಾವಿ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ವಿಠ್ಠಲ ಲೋಖರಿ ಎಂದು ಗುರುತಿಸಲಾಗಿದೆ. ಮಗ್ಗದ ಕೆಲಸದಿಂದ ದೊರೆಯುತ್ತಿದ್ದ ಅಲ್ಪ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಅವರು, ಪತ್ನಿಯ ಅನಾರೋಗ್ಯದ ಚಿಕಿತ್ಸಾ ವೆಚ್ಚ ಹಾಗೂ ಕುಟುಂಬದ ಅಗತ್ಯಗಳಿಗಾಗಿ ಸುಮಾರು 6 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲದ ಹೊರೆಯಿಂದ ಹೊರಬರಲಾಗದೆ ಆಗಸ್ಟ್ 16ರಂದು ಅವರು ತಾವು ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ವಿಠ್ಠಲ ಅವರು ಪತ್ನಿ ನಿರ್ಮಲಾ ಹಾಗೂ ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ತಂದೆಯ ಸಾವಿನಿಂದ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮಕ್ಕಳ ಶಿಕ್ಷಣ ಹಾಗೂ ಪತ್ನಿಯ ಚಿಕಿತ್ಸೆಗೆ ಸರ್ಕಾರ ನೆರವು ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:
ನೇಕಾರ ಕಾರ್ಮಿಕರಿಗೆ ಕನಿಷ್ಠ ವೇತನ, ಪಿಎಫ್, ಇಎಸ್‌ಐ ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ನೇಕಾರ ಕಾರ್ಮಿಕರ ಸಂಕಷ್ಟ ನಿವಾರಣೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ. ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, 6 ಲಕ್ಷ ರೂ. ಸಾಲ ಮನ್ನಾ, ಪತ್ನಿಗೆ ಉದ್ಯೋಗ ಹಾಗೂ ಮಕ್ಕಳಿಗೆ ಶಿಕ್ಷಣ ನೆರವು ನೀಡಬೇಕು ಎಂಬ ಬೇಡಿಕೆಗಳು ಕೇಳಿಬಂದಿವೆ.



