August 26, 2026
Wednesday, August 26, 2026
spot_img

ಅಂಕೋಲಾದಲ್ಲಿ ಈದ್‌ ಮಿಲಾದ್‌ ರ‍್ಯಾಲಿಯಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಿಸಿದ ವ್ಯಕ್ತಿಯ ಬಂಧನ

ಹೊಸದಿಗಂತ ವರದಿ ಅಂಕೋಲಾ:

ಈದ್ ಮಿಲಾದ್ ನಿಮಿತ್ತ ಬುಧವಾರ ಪಟ್ಟಣದಲ್ಲಿ ನಡೆದ ರ‍್ಯಾಲಿಯ ಸಮಯದಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಿಸಿದ ಪ್ರಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೆ ಪೊಲೀಸರು ಅಂಕೋಲಾ ಕೃಷ್ಣಾಪುರದ ವಿಠ್ಠಲಘಾಟ್ ನಿವಾಸಿ ಮಹ್ಮದ್ ರಜಾ ಅಕ್ಬರ್ ಅಲಿ (29) ಎಂಬಾತನನ್ನು ಬಂಧಿಸಿದ್ದಾರೆ. ಸಮಾಜದ ಸ್ವಾಸ್ತ್ಯಕ್ಕೆ ಧಕ್ಕೆ ಉಂಟು ಮಾಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೆರವಣಿಗೆಯ ಆರಂಭದಲ್ಲಿ ಕೆಲವರು ಧ್ವಜ ಹಾರಿಸದಂತೆ ತಡೆ ಒಡ್ಡಿದರೂ ಕೇಳದೆ ತಾನೇ ಮನೆಯಿಂದ ಮಾಡಿಕೊಂಡು ಬಂದಿದ್ದ ಪ್ಯಾಲೆಸ್ಟೈನ್ ಧ್ವಜವನ್ನು ಈತ ಹಾರಿಸಿ ಹುಚ್ಚಾಟ ಮೆರೆದಿದ್ದ. ತಕ್ಷಣ ಕಾರ್ಯೋನ್ಮುಖರಾದ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಧ್ವಜವನ್ನು ಕಿತ್ತುಕೊಂಡರು. ನಂತರ ಪ್ರಕರಣ ಗಂಭೀರವಾಗುತ್ತಿದಂತೆಯೇ ಆತನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿಯ ಹಲವು ಪ್ರಮುಖರು ಆಗಮಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟ‌ನೆ ನಡೆಸಿ ದೇಶದ್ರೋಹಿ ಮಹ್ಮದ್ ರಜಾ ಅಕ್ಬರ್ ಅಲಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಘೋಷಣೆ ಕೂಗಿದರು.

ಸೌಹಾರ್ದತೆಗೆ ಹೆಸರಾದ ಅಂಕೋಲಾದಲ್ಲಿ ವಿನಾಕಾರಣ ಇಂತಹ ಕೃತ್ಯ ನಡೆಸಿ ಗಲಭೆ ಎಬ್ಬಿಸುವ ಹುನ್ನಾರ ನಡೆದಿದ್ದು, ಪೊಲೀಸರು ಒತ್ತಡಕ್ಕೆ ಮಣಿಯದೇ ಇಂತಹ ಕೃತ್ಯವನ್ನು ಹೊಸಕಿ ಹಾಕಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:

ಸ್ಥಳದಲ್ಲಿ ಉಪಸ್ಥಿತರಿದ್ದ ಡಿವೈಎಸ್‌ಪಿ ಗಿರೀಶ ಮಾತನಾಡಿ, ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ ಶಾಂತರಾಗಿರಿ. ತಪ್ಪು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಆಗುತ್ತದೆ ಎಂದು ಸಮಾಧಾನಪಡಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಭಾಸ್ಕರ ನಾರ್ವೇಕರ್, ನಾಗೇಶ ನಾಯ್ಕ ಆಚಾ, ಕೃಷ್ಣಕುಮಾರ ಮಹಾಲೆ, ಸುರೇಶ ವೆರ್ಣೇಕರ, ಚಂದ್ರಕಾಂತ ನಾಯ್ಕ, ರಾಘವೇಂದ್ರ ನಾಯ್ಕ, ವಿಶ್ವನಾಥ ನಾಯ್ಕ, ದಾಮೋದರ ರಾಯ್ಕರ, ಅಮರ ನಾಯ್ಕ, ನಿಲೇಶ ನಾಯ್ಕ, ಮಂಜುನಾಥ ನಾಯ್ಕ, ಪ್ರವೀಣ ನಾಯ್ಕ ಸೇರಿದಂತೆ ಅನೇಕರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !