ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ಉತ್ತರ ಭಾಗದಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದ ಬೆನ್ನಲ್ಲೇ, ನೆರೆಯ ಬಿಹಾರದಲ್ಲೂ ಪ್ರವಾಹದ ಆತಂಕ ಹೆಚ್ಚಾಗಿದ್ದು, ನೇಪಾಳದಿಂದ ಹರಿದುಬರುವ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ಹೈ ಅಲರ್ಟ್ ಘೋಷಿಸಿದೆ.
ಜೊತೆಗೆ ಈ ಭಾಗದ ನದಿ ತೀರದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ನೇಪಾಳದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮನೆಗಳು, ರಸ್ತೆಗಳು, ಸೇತುವೆಗಳು ಹಾಗೂ ಹಲವು ಮೂಲಸೌಕರ್ಯಗಳು ಕೊಚ್ಚಿಹೋಗಿವೆ. ಭೋಟೆ ಕೋಶಿ ನದಿಯಲ್ಲಿ ಏಕಾಏಕಿ ಭಾರಿ ಪ್ರಮಾಣದ ನೀರು ಹರಿದು ಬಂದಿದ್ದು, ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಇದರ ಬೆನ್ನಿಗೇ ಗಂಡಕಿ ಸೇರಿದಂತೆ ಗಡಿ ದಾಟಿ ಬಿಹಾರಕ್ಕೆ ಹರಿಯುವ ನದಿಗಳ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಗಂಡಕಿ ನದಿಯ ತೀರದಲ್ಲಿರುವ ಆರು ಜಿಲ್ಲೆಗಳಲ್ಲಿ NDRF ಮತ್ತು SDRF ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಗಂಡಕಿ ಬ್ಯಾರೇಜ್ ಹಾಗೂ ಸಂಬಂಧಿತ ಜಲಮಾರ್ಗಗಳ ಮೇಲೂ ನಿಗಾ ಹೆಚ್ಚಿಸಲಾಗಿದೆ. ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಹಾರ ಸರ್ಕಾರ ಪರಿಸ್ಥಿತಿಯ ಮೇಲ್ವಿಚಾರಣೆಗೆ ಉನ್ನತ ಮಟ್ಟದ ತಂಡ ರಚಿಸಿದ್ದು, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದೆ.
ನೇಪಾಳದಲ್ಲಿ ಭಾರೀ ನಾಶ
ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಉಂಟಾದ ಏಕಾಏಕಿ ಪ್ರವಾಹದಿಂದ ವಾಹನಗಳು, ಮನೆಗಳು, ಸೇತುವೆಗಳು ಮತ್ತು ಇತರ ಕಟ್ಟಡಗಳು ಕೊಚ್ಚಿಹೋಗಿವೆ. ಟಿಬೆಟ್‌ನ ಗೈರಾಂಗ್ ಬಂದರು ಪ್ರದೇಶದಲ್ಲಿಯೂ ಭೂಕುಸಿತ ಹಾಗೂ ಪ್ರವಾಹದಿಂದ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಹಿಮ-ಬಂಡೆಗಳ ಕುಸಿತ ಅಥವಾ ಭೂಕುಸಿತದಿಂದ ನದಿಯ ಹರಿವು ತಡೆದು ಏಕಾಏಕಿ ನೀರು ಬಿಡುಗಡೆಯಾಗಿರುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮೇಲ್ಭಾಗದಲ್ಲಿ ಇನ್ನೂ ನೀರಿನ ಹರಿವಿಗೆ ಅಡ್ಡಿಯಾಗಿರುವ ಸಾಧ್ಯತೆಯಿರುವುದರಿಂದ ಮತ್ತೊಂದು ಪ್ರವಾಹದ ಅಪಾಯದ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.



