August 27, 2026
Thursday, August 27, 2026
spot_img

ಕೈಲಾಸ ಯಾತ್ರಾರ್ಥಿಗಳು, ಕಾರ್ಮಿಕರ ಪತ್ತೆಗೆ ನೇಪಾಳ ಸರ್ಕಾರದೊಂದಿಗೆ ಕೈಜೋಡಿಸಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದ ಹಿನ್ನೆಲೆ ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳು ಮತ್ತು ಸ್ಥಳೀಯ ವಿದ್ಯುತ್ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸೇರಿದಂತೆ ಒಟ್ಟು 288 ಭಾರತೀಯರು ಸಂಪರ್ಕ ಸಿಗುತ್ತಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಗುರುವಾರ ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ದುರಂತ ಸಂಭವಿಸಿದ ಪ್ರದೇಶದಲ್ಲಿ ಮೊಬೈಲ್ ಮತ್ತು ದೂರವಾಣಿ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ ಅಲ್ಲಿರುವ ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಇದುವರೆಗೆ ತಮಿಳುನಾಡಿನ 21 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ,ಎಂದು ತಿಳಿಸಿದ್ದಾರೆ.

ಸಂಪರ್ಕಕ್ಕೆ ಸಿಗದ ಕಾರ್ಮಿಕರು, ಯಾತ್ರಿಗಳು

ಸಚಿವಾಲಯ ನೀಡಿರುವ ಮಾಹಿಯ ಪ್ರಕಾರ, ರಸುವಾ ಜಿಲ್ಲೆಯ ತ್ರಿಶೂಲಿ-1 ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 73 ಭಾರತೀಯ ಕಾರ್ಮಿಕರು ಸಂಪರ್ಕ ಸಿಗುತ್ತಿಲ್ಲ. ಪ್ರತ್ಯೇಕ ಪ್ರವಾಸ ಸಂಸ್ಥೆಗಳ ಮೂಲಕ ಯಾತ್ರೆಗೆ ತೆರಳಿದ್ದ ತಮಿಳುನಾಡಿನ 37 ಮತ್ತು 49 ಜನರ ಎರಡು ಗುಂಪುಗಳು ನಾಪತ್ತೆಯಾಗಿವೆ. ಈ ದುರಂತ ನಡೆದ ತಿಮೂರೆ ಎಂಬ ಪ್ರದೇಶದಲ್ಲಿದ್ದ ಪಶ್ಚಿಮ ಬಂಗಾಳದ 32 ಪ್ರಜೆಗಳ ಮಾಹಿತಿಯೂ ಇದುವರೆಗೆ ಲಭ್ಯವಾಗಿಲ್ಲ. ಇನ್ನು, ಕೇರಳದ 33 ಜನರು ಹಾಗೂ ವಿವಿಧ ರಾಜ್ಯಗಳ 61 ಪ್ರವಾಸಿಗರ ಸಂಪರ್ಕ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.

ಸಚಿವಾಲಯದ ಸ್ಪಷ್ಟನೆ ಏನು?

ಸಂಪರ್ಕ ಸಿಗುತ್ತಿಲ್ಲ ಎಂದ ತಕ್ಷಣ ಅವರು ಅಪಾಯದಲ್ಲಿದ್ದಾರೆ ಎಂದರ್ಥವಲ್ಲ. ಕೇವಲ ಸಂವಹನ ವ್ಯವಸ್ಥೆ ಹಾಳಾಗಿರುವುದರಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನ 21 ಜನರ ರಕ್ಷಣೆ

ಈ ನಡುವೆ ತಮಿಳುನಾಡಿನ 21 ಜನರನ್ನು ರಕ್ಷಿಸಲಾಗಿದ್ದು, ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಅವರು ರಕ್ಷಿಸಲ್ಪಟ್ಟವರೊಂದಿಗೆ ಮಾತನಾಡಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗುತ್ತಿದೆ.  ಶೀಘ್ರದಲ್ಲೇ ಅವರನ್ನು ಕಠ್ಮಂಡು ಮಾರ್ಗವಾಗಿ ಭಾರತಕ್ಕೆ ಮರಳಿ ಕರೆತರಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಭಾರತದ ಬೆಂಬಲ

ಘಟನೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಭಾರತವು ನೇಪಾಳದ ಪರವಾಗಿ ನಿಲ್ಲಲಿದ್ದು, ರಕ್ಷಣಾ ಕಾರ್ಯಕ್ಕೆ ಬೇಕಾದ ಎಲ್ಲಾ ರೀತಿಯ ಮಾನವೀಯ ಸಹಾಯವನ್ನು ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.

ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಾಪತ್ತೆಯಾದವರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದೆ. ರಕ್ಷಿಸಲ್ಪಟ್ಟವರ ಹೆಸರಿನ ವಿವರಗಳನ್ನು ಸಚಿವಾಲಯದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !