November 2, 2026
Monday, November 2, 2026
spot_img

ಓಣಂ ಸಂಭ್ರಮ ನಡುವೆ ಮದ್ಯ ಮಾರಾಟದಲ್ಲೂ ಭರ್ಜರಿ ಏರಿಕೆ: ಎಂಟೇ ದಿನದಲ್ಲಿ ನಡೆದಿದೆ 771 ಕೋಟಿ ರೂ.ಗಳ ವಹಿವಾಟು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಓಣಂ ಹಬ್ಬದ ಸಂಭ್ರಮದ ನಡುವೆಯೇ ಮದ್ಯ ಮಾರಾಟದಲ್ಲೂ ಭರ್ಜರಿ ಏರಿಕೆ ದಾಖಲಾಗಿದ್ದು, ಉತ್ರಾಡಂಗೆ ಮುನ್ನದ ಎಂಟು ದಿನಗಳಲ್ಲಿ ರಾಜ್ಯದ ಬೆವ್ಕೋ ಮತ್ತು ಕನ್ಸ್ಯೂಮರ್‌ಫೆಡ್ ಮಳಿಗೆಗಳ ಮೂಲಕ ಒಟ್ಟು 771.29 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ 694.96 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು. ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು 76.33 ಕೋಟಿ ರೂ. ಹೆಚ್ಚು ಮಾರಾಟ ದಾಖಲಾಗಿದ್ದು, ಈ ಮೂಲಕ ಓಣಂ ಅವಧಿಯ ಮದ್ಯ ಮಾರಾಟದಲ್ಲಿ ಗಮನಾರ್ಹ ಏರಿಕೆಯಾಗಿದೆ.

ಉತ್ರಾಡಂ ದಿನ ಒಂದರಲ್ಲೇ 146.66 ಕೋಟಿ ರೂ. ವಹಿವಾಟು

ಓಣಂ ಆಚರಣೆಗೆ ಮುನ್ನದ ಪ್ರಮುಖ ದಿನವಾದ ಉತ್ರಾಡಂ ಆ.25ರಂದು ಮದ್ಯ ಮಾರಾಟ ಮತ್ತಷ್ಟು ಹೆಚ್ಚಿತ್ತು. ಆ ದಿನ ರಾಜ್ಯಾದ್ಯಂತ ಬೆವ್ಕೋ ಮತ್ತು ಕನ್ಸ್ಯೂಮರ್‌ಫೆಡ್ ಮಳಿಗೆಗಳ ಮೂಲಕ ಒಟ್ಟು 146.66 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಇದರಲ್ಲಿ ಬೆವ್ಕೋ ಮಳಿಗೆಗಳ ಪಾಲು 126.31 ಕೋಟಿ ರೂ., ಕನ್ಸ್ಯೂಮರ್‌ಫೆಡ್‌ನ 49 ಮದ್ಯ ಮಾರಾಟ ಮಳಿಗೆಗಳ ಮೂಲಕ 20.35 ಕೋಟಿ ರೂ. ವಹಿವಾಟು ನಡೆದಿದೆ. ಉತ್ರಾಡಂ ದಿನದ ಬೆವ್ಕೋ ಮಾರಾಟ ಕಳೆದ ವರ್ಷದ 137.64 ಕೋಟಿ ರೂ.ಗೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಹೀಗಿದ್ದರೂ ಹಿಂದಿನ ಏಳು ದಿನಗಳ ಮಾರಾಟದ ಏರಿಕೆಯಿಂದಾಗಿ ಎಂಟು ದಿನಗಳ ಒಟ್ಟು ವಹಿವಾಟು ಕಳೆದ ವರ್ಷದ ಮಟ್ಟಕ್ಕಿಂತ ಸಾಕಷ್ಟು ಹೆಚ್ಚಾಗಿದೆ.

ಇದನ್ನೂ ಓದಿ:

ಇನ್ನೂ ಅಂತಿಮ ಓಣಂ ಮಾರಾಟದ ಲೆಕ್ಕ ಬಾಕಿ ಇದೆ!

771.29 ಕೋಟಿ ರೂ. ಅಂಕಿ ಉತ್ರಾಡಂವರೆಗೆ ಎಂಟು ದಿನಗಳ ಮಾರಾಟಕ್ಕೆ ಸಂಬಂಧಿಸಿದದ್ದು. ಹಿಂದಿನ ವರ್ಷ ಇದೇ ಅವಧಿಯಲ್ಲಿ 694.96 ಕೋಟಿ ರೂ.ಗಳ ಮಾರಾಟವಾಗಿತ್ತು. ಅಂತಿಮ ಓಣಂ ಮಾರಾಟದ ಲೆಕ್ಕ ಇನ್ನಷ್ಟೇ ಆಗಬೇಕಿದೆ. ಒಟ್ಟಿನಲ್ಲಿ, ಕೇರಳದಲ್ಲಿ ಈ ವರ್ಷದ ಓಣಂ ಅವಧಿಯ ಮದ್ಯ ಮಾರಾಟ ಕಳೆದ ವರ್ಷದ ಹೋಲಿಕೆಯಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಹಬ್ಬದ ದಿನಗಳಲ್ಲಿ ಮದ್ಯಕ್ಕೆ ಇರುವ ಭಾರಿ ಬೇಡಿಕೆಯನ್ನು ಈ ಅಂಕಿಅಂಶಗಳು ಮತ್ತೊಮ್ಮೆ ತೋರಿಸಿವೆ.

Must Read