ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ರ್ಯಾಲಿಗೆ ಲಕ್ಷಾಂತರ ಜನ ಆಗಮಿಸಿದ್ದರು ಎಂದು ತೋರಿಸಲು ಕಾಂಗ್ರೆಸ್ ಕೃತಕ ಬುದ್ಧಿಮತ್ತೆ ಫೋಟೊ ಬಳಕೆ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೇವಡಿ ಮಾಡಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಇಂಡಿಯಾ ಒಕ್ಕೂಟವು ನಿನ್ನೆ ದೊಡ್ಡ ಮಟ್ಟದ ರ್ಯಾಲಿಯೊಂದನ್ನು ಆಯೋಜಿಸಿತ್ತು. ಇದರಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.
ಇದರ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಲಕ್ಷಾಂತರ ಮಂದಿ ಭಾಗಿಯಾದಂತೆ ಕಾಣಿಸುತ್ತಿದೆ. ಇದು ನಿಜವಾದ ಫೋಟೊ ಅಲ್ಲ, ಎಐ ಫೋಟೊ, ಅದನ್ನಾದರೂ ಸರಿಯಾಗಿ ಮಾಡೋಕೆ ಬಂದಿಲ್ಲ ಎಂದು ರಿಜಿಜು ವ್ಯಂಗ್ಯವಾಡಿದ್ದಾರೆ. ರಾಮಲೀಲಾ ಮೈದಾನ ಜನರಿಂದ ತುಂಬಿತ್ತು ಎಂದು ತೋರಿಸಲು ಬಳಸಿದ ಆ ನಕಲಿ AI ಫೋಟೋವನ್ನು ಸಹ ಕಾಂಗ್ರೆಸ್ ಪಕ್ಷದ ‘ಸುಳ್ಳು ನಿರೂಪಣೆಗಳನ್ನು ಸೃಷ್ಟಿಸುವ ತಂಡ’ (fake narrative team) ಸರಿಯಾಗಿ ಮಾಡಿಲ್ಲ!” ಎಂದು ಅವರು ಬರೆದುಕೊಂಡಿದ್ದಾರೆ.



