August 27, 2026
Thursday, August 27, 2026
spot_img

ದಕ್ಷಿಣ ಕನ್ನಡ ಜಿಲ್ಲೆಯನ್ನೂ ಆವರಿಸಿದೆ ಎಚ್1ಎನ್1: ಮಂಗಳೂರು ನಗರವೇ ಈಗ ನಂ.1

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್1ಎನ್1 ಪ್ರಕರಣ ಏರಿಕೆಯಾಗುತ್ತಿದ್ದು, 2026ರ ಆಗಸ್ಟ್ 25ರವರೆಗೆ ಒಟ್ಟು 87 ಎಚ್1ಎನ್1 ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.

ಪತ್ತೆಯಾದ ಪ್ರಕರಣಗಳಲ್ಲಿ ಮಂಗಳೂರು ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 60 ಪ್ರಕರಣಗಳು ದಾಖಲಾಗಿವೆ. ಇನ್ನುಳಿದಂತೆ ಬಂಟ್ವಾಳದಲ್ಲಿ 14, ಪುತ್ತೂರಿನಲ್ಲಿ 7, ಬೆಳ್ತಂಗಡಿಯಲ್ಲಿ 5 ಹಾಗೂ ಸುಳ್ಯದಲ್ಲಿ 1 ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಶೀತ ಹವಾಮಾನದಲ್ಲಿ ಎಂದರೆ ಜನವರಿಯಿಂದ ಮಾರ್ಚ್ ಹಾಗೂ ಜುಲೈಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಹೆಚ್ಚಾಗಿರುತ್ತದೆ. ಐಎಚ್ ಐಪಿ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 2025ರಲ್ಲಿ ಜನವರಿಯಿಂದ ಆಗಸ್ಟ್‌ವರೆಗೆ 71 ಪ್ರಕರಣಗಳಿತ್ತು. ಜನವರಿಯಿಂದ ಡಿಸೆಂಬರ್ ತನಕ 207 ಪ್ರಕರಣಗಳು ಪತ್ತೆಯಾಗಿತ್ತು. 2024ರಲ್ಲಿ ಇದೇ ಸಮಯದಲ್ಲಿ 208 ಪ್ರಕರಣಗಳು ದಾಖಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಮುಂಜಾಗೃತೆ ಅತೀ ಅಗತ್ಯ

ಜನತೆಯನ್ನು ಎಡೆಬಿಡದೆ ಕಾಡುವ ಈ ಕಾಯಿಲೆ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಇನ್‌ಪ್ಲೂಯೆಂಜಾ ಕಾಯಿಲೆ (ಐಎಲ್‌ಐ) ಮತ್ತು ತೀವ್ರ ಉಸಿರಾಟದ ಸೋಂಕು (ಎಸ್‌ಎಆರ್‌ಐ) ಪ್ರಕರಣಗಳನ್ನು ಹೆಚ್ಚು ಮುತುವರ್ಜಿವಹಿಸಲಾಗುತ್ತಿದ್ದು, ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣ್ಗಾವಲು ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ:

ಶಾಲಾ ಮಕ್ಕಳಲ್ಲಿ ಸಾಧ್ಯತೆ ಹೆಚ್ಚು:

ಇನ್‌ಪ್ಲೂಯೆಂಜಾ ಪ್ರಕರಣಗಳು ಮಕ್ಕಳು, ಗರ್ಭಿಣಿಯರು, ವಯಸ್ಸಾದವರು ಸೇರಿದಂತೆ ಇತರ ಕಾಯಿಲೆಯಿಂದ ಬಳಲುತ್ತಿರುವ ಮಂದಿಗಳಲ್ಲಿ ಕೊಂಚ ಹೆಚ್ಚು ಜಾಗೃತೆ ವಹಿಸಬೇಕಾಗುತ್ತದೆ. ಶಾಲಾ ಮಕ್ಕಳಲ್ಲಿ ಇದು ಬೇಗನೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕುರಿತು ಈಗಾಗಲೇ ಡಿಡಿಪಿಐ, ಡಿಡಿಪಿಯು ಸೇರಿದಂತೆ ಎಲ್ಲ ಇಲಾಖೆಯ ಹಾಸ್ಟೆಲ್‌ಗಳಿಗೆ ಮಾಹಿತಿ ರವಾನೆ ಮಾಡಲಾಗಿದ್ದು, ಇನ್‌ಪ್ಲೂಯೆಂಜಾ ಅಥವಾ ಇತರ ಯಾವುದೇ ಜ್ವರಗಳು ಕಾಣಿಸಿಕೊಂಡಾಗ ಇಂತಹ ಮಕ್ಕಳ ಮಾಹಿತಿ ಆರೋಗ್ಯ ಇಲಾಖೆಗೆ ನೀಡುವಂತೆ ಜತೆಗೆ ಮಕ್ಕಳು ಶಾಲೆಗಳಿಗೆ ಕಳುಹಿಸದಂತೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಈ ಸಂದರ್ಭ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !