ಹೊಸದಿಗಂತ ವರದಿ ವಿಜಯಪುರ:
ಹಿರಿಯ ಪತ್ರಕರ್ತ ಪರಶುರಾಮ ಶಿವಶರಣ ಅವರ ಮೆನೆಗೆ ತೆರಳಿ ಧಮ್ಕಿ ಹಾಕಿರುವ ಅಕ್ಕಿ ಕಳ್ಳರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ನಗರದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಗೆ ಕಾನಿಪ ಜಿಲ್ಲಾ ಘಟಕ, ಆಮ್ ಆದ್ಮಿ ಪಕ್ಷ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಕಾನಿಪ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಮಾತನಾಡಿ, ಪತ್ರಕರ್ತರನ್ನು ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂದು ಕರೆಯಲಾಗುತ್ತಿದೆ. ಆದರೆ ವಿಜಯಪುರದಲ್ಲಿ ಆ ಅಂಗ ಕುಸಿಯುತ್ತಿದೆ. ಪತ್ರಕರ್ತರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಸೃಷ್ಠಿಯಾಗಿದೆ. ಜಿಲ್ಲಾಡಾಳಿತ, ಜಿಲ್ಲಾ ಪೊಲೀಸ್ ಅಧಿಕಾರಿಗಳು ಪತ್ರಕರ್ತ ಪರಶುರಾಮ ಶಿವಶರಣ ಅವರ ಮನೆಗೆ ಹೋಗಿರುವ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ಅವರ ಮೇಲೆ ಸೂಕ್ತ ಕ್ರಮ ಆಗದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಸ್ವಾಸ್ತ್ಯ ಸಮಾಜ ನಿರ್ಮಾಣ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅಕ್ಕ ಕಳ್ಳರ ಮೇಲೆ ಜಿಲ್ಲಾಡಳಿತ ಹಾಗೂ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ಪತ್ರಕರ್ತ ಶರಣು ಮಸಳಿ, ಪತ್ರಕರ್ತ ಇಂದುಶೇಖರ ಮಣೂರ ಮಾತನಾಡಿ, ಪತ್ರಕರ್ತ ಪರಶುರಾಮ ಶಿವಶರಣ ಅವರ ಮೇಲೆ ಹಲ್ಲೆಗೆ ಯತ್ನಿಸುವ ಭಾಗವಾಗಿ ಅವರ ಮನೆಗೆ ತೆರಳಿ ಭಯಪಡಿಸಲು ಪ್ರಯತ್ನ ಮಾಡಿರುವವರನ್ನು ಸುಮ್ಮನೆ ಬಿಡಬಾರದು. ನಾವು ಸಮಾಜದ ಧ್ವನಿಯಾಗಿ, ಜನರಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರು. ಸರ್ಕಾರಕ್ಕೆ ಮಾಹಿತಿ ನೀಡುವ ನಮ್ಮ ಧ್ವನಿಯನ್ನು ಹತ್ತಿಕ್ಕಲು ದುಷ್ಟಶಕ್ತಿಗಳು ಪ್ರಯತ್ನ ನಡೆಯುತ್ತಲೇ ಇವೆ. ಸರ್ಕಾರಗಳು ಪತ್ರಕರ್ತರ ರಕ್ಷಣೆಗೆ ಸೂಕ್ತ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:
ಹಿರಿಯ ಪತ್ರಕರ್ತರಾದ ಬಸವರಾಜ ಸಂಪಳ್ಳಿ, ಪರಶುರಾಮ ಶಿವಶರಣ ಮಾತನಾಡಿದರು. ಪತ್ರಕರ್ತರಾದ ಮೋಹನ ಕುಲಕರ್ಣಿ, ಸಮೀರ್ ಇನಾಮದಾರ, ಅವಿನಾಶ ಬಿದರಿ, ವಿನೋದ ಸಾರವಾಡ, ಗೋಪಾಲ ಕನಿಮನಿ, ಶಿವಾನಂದ ಶಿವಶರಣ, ಗುರುರಾಜ ಗದ್ದನಕೇರಿ, ಷಡಕ್ಷರಿ ಕಂಪಣ್ಣನವರ, ಬಾಬು ತಡಲಗಿ, ಸುನೀಲ ಭಾಸ್ಕರ್, ಮಂಜು ಕಲಾಲ್, ಶರಣು ಮರನೂರ, ದಯಾನಂದ ಸಾವಳಗಿ, ಕಲ್ಲು ಶಿವಶರಣ, ಸಂಜೀವ ಕುಲಕರ್ಣಿ, ವೆಂಕಟೇಶ ಭೈರಾಮಡಗಿ, ಫಯಾಜ್ ಕಲಾದಗಿ, ರಾಜೇಂದ್ರಸಿಂಗ್ ಹಜೇರಿ ಇದ್ದರು.



