ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ್ ವೇಳೆ ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಪತ್ತೆ ಹಚ್ಚುವುದಕ್ಕಾಗಿ ಪಾಕಿಸ್ತಾನವು ಗೂಢಚರರನ್ನು ನಿಯೋಜಿಸಿತ್ತಲ್ಲದೆ, ದೇಶದೊಳಗಿನ ವಿದ್ರೋಹಿಗಳ ಸ್ಲೀಪರ್ ಸೆಲ್ಗಳನ್ನು ಸಕ್ರಿಯಗೊಳಿಸಿತ್ತು ಎಂಬ ಮಾಹಿತಿಯನ್ನು ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಬಹಿರಂಗಪಡಿಸಿದ್ದಾರೆ.
ಎಸ್-400 ನಿಯೋಜನೆ ವ್ಯವಸ್ಥೆಯ ಸ್ಥಳಗಳನ್ನು ಗುರುತಿಸಲು ಪಾಕಿಸ್ತಾನ ಎಲ್ಲ ತಂತ್ರಗಳನ್ನೂ ಬಳಸಿತ್ತು ಎಂದೂ ಅವರು ಹೇಳಿದ್ದಾರೆ.
ಪಾಕಿಸ್ತಾನವು ಭಾರತದ ಮೇಲೆ ನಡೆಸಿದ ಎಲ್ಲ ವಾಯುದಾಳಿಗಳನ್ನೂ ಎಸ್-400 ತಡೆದು ಹಿಮ್ಮೆಟ್ಟಿಸಿದ್ದರಿಂದ, ಎಸ್-400 ತನಗೆ ಅತಿದೊಡ್ಡ ಆಪತ್ತು ಎಂಬುದಾಗಿ ಪಾಕಿಸ್ತಾನ ಪರಿಗಣಿಸಿತ್ತು.ಪಾಕಿಸ್ತಾನ ಈ ವಾಯುರಕ್ಷಣಾ ವ್ಯವಸ್ಥೆಗಳನ್ನು ಪತ್ತೆಹಚ್ಚುವುದಕ್ಕಾಗಿ ಇತರ ದೇಶಗಳಿಂದ ಉಪಗ್ರಹ ಬೆಂಬಲ, ವಾಯು ಗುಪ್ತಚರ ವ್ಯವಸ್ಥೆ ಮತ್ತು ಇಲೆಕ್ಟ್ರಾನಿಕ್ ಯುದ್ಧಾಸ್ತ್ರಗಳ ಸಾಮರ್ಥ್ಯ ಇತ್ಯಾದಿ ಬೇರೆ ಬೇರೆ ಪ್ರಯತ್ನಗಳನ್ನು ನಡೆಸಿತ್ತು ಎಂದು ಅವರು ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದರು.
ಇನ್ನೊಂದು ದೇಶದಿಂದ ಉಪಗ್ರಹ ನೆರವನ್ನು ಕೂಡ ಪಾಕಿಸ್ತಾನ ಪಡೆದಿದೆ ಎಂಬ ಸುಳಿವನ್ನು ನೀಡಿದ ಅವರು, ಆ ದೇಶದ ಹೆಸರನ್ನು ಹೇಳಲು ನಿರಾಕರಿಸಿದರು. ಆದಂಪುರ ವಾಯು ನೆಲೆಯ ಮೇಲೆ ಪಾಕಿಸ್ತಾನ ಭಾರೀ ದಾಳಿ ನಡೆಸಿದ್ದು, ಅಲ್ಲಿ ಎಸ್-400 ವ್ಯವಸ್ಥೆಯನ್ನು ನಿಯೋಜಿಸಲಾಗಿತ್ತೆಂದು ಅದು ನಂಬಿದ್ದುದೇ ಇದಕ್ಕೆ ಕಾರಣವಾಗಿತ್ತು. ಆದರೆ ಎಸ್-400 ಪಾಕಿಸ್ತಾನದ ಬೃಹತ್ ಯುದ್ಧ ವಿಮಾನವೊಂದನ್ನು 300ಕಿ.ಮೀ.ದೂರದಲ್ಲೇ ಧ್ವಂಸಗೊಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಸಂಘರ್ಷದ ವೇಳೆ ಈ ವ್ಯವಸ್ಥೆಯು ಬಹುಮುಖಿ ವಾಯು ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಿದ ಕೀರ್ತಿಗೆ ಭಾಜನವಾಗಿದೆ ಎಂದು ಅವರು ಶ್ಲಾಘಿಸಿದರು.
ಎಸ್-400 ವ್ಯವಸ್ಥೆಯ 4ನೇ ಘಟಕವನ್ನು ಭಾರತ ಪಡೆಯುವ ಮೂಲಕ ಭಾರತೀಯ ವಾಯುಪಡೆಯು ವಾಯುರಕ್ಷಣಾ ಜಾಲದ ಬಹುವಿಸ್ತಾರದ ಭೌಗೋಳಿಕ ಪ್ರದೇಶವನ್ನು ಈಗ ಆವರಿಸಿದ್ದು, ಇದರಿಂದಾಗಿ ಭಾರತದ ಮಹತ್ವದ ಸೇನಾ ಮತ್ತು ವ್ಯೂಹಾತ್ಮಕ ಆಸ್ತಿಗಳನ್ನು ರಕ್ಷಿಸುವ ದೇಶದ ಸಾಮರ್ಥ್ಯ ಇನ್ನಷ್ಟು ಬಲಗೊಂಡಂತಾಗಿದೆ . ಎಸ್-400 ಸಂಯೋಜನೆಯು ದೀರ್ಘವ್ಯಾಪ್ತಿಯಲ್ಲಿ ವೈರಿ ದಾಳಿಗೆ ತಡೆ, ಬಹುಹಂತದ ಪ್ರತಿಬಂಧಕ ಅಂಶಗಳು ಮತ್ತು ವಿಭಿನ್ನ ವರ್ಗಗಳ ವಾಯು ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯದಿಂದಾಗಿ ಇದು ಭಾರತದ ಅತ್ಯಂತ ಮಹತ್ವದ ಬಹುಹಂತಗಳ ವಾಯುರಕ್ಷಣಾ ವ್ಯವಸ್ಥೆಯಾಗಿ ರೂಪುಗೊಳ್ಳುವಂತಾಗಿದೆ ಎಂದು ಅವರು ವಿವರಿಸಿದರು. ಆಪರೇಷನ್ ಸಿಂದೂರ್ನ ವೇಳೆ, ಎಸ್-400 ವಾಯುರಕ್ಷಣಾ ವ್ಯವಸ್ಥೆಯು ಪಾಕಿಸ್ತಾನ ನಡೆಸಿದ ಎಲ್ಲ ಡ್ರೋನ್ ದಾಳಿ, ಕ್ಷಿಪಣಿ ದಾಳಿ, ಯುದ್ಧ ವಿಮಾನಗಳ ದಾಳಿಗಳೆಲ್ಲವನ್ನೂ ವಿಫಲಗೊಳಿಸಿರುವುದು ಜಗತ್ತನ್ನೇ ನಿಬ್ಬೆರಗಾಗಿಸಿತ್ತು.



