ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಗುರುವಾರ ವಿಧಾನಸಭೆಯ ಅಧಿವೇಶನದಲ್ಲಿ ತಮಗೆ ನಿಗದಿಪಡಿಸಿದ್ದ ಸಿಎಂ ಆಸನವನ್ನು ಬಿಟ್ಟು, ಮುಂಭಾಗದ ಸಾಲಿನಲ್ಲಿದ್ದ ಸಚಿವರ ಪಕ್ಕದಲ್ಲಿ ಹೋಗಿ ಕುಳಿತಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸಂಪ್ರದಾಯ ಮುರಿದ ಸಿಎಂ:
ಸಾಮಾನ್ಯವಾಗಿ ಸ್ಪೀಕರ್ ಜೆ. ಸಿ. ಡಿ. ಪ್ರಭಾಕರ್ ಅವರ ಬಳಿ ಇರುವ ಪ್ರತ್ಯೇಕ ಕುರ್ಚಿಯಲ್ಲಿ ಕುಳಿತುಕೊಳ್ಳುವ ಸಿಎಂ ವಿಜಯ್, ಈ ಬಾರಿ ಸಚಿವರ ಸಾಲಿಗೆ ಶಫ್ಟ್ ಆದರು. ಸದನದ ನಾಯಕರಾದ ಕೆ. ಎಂ. ಸೆಂಗೋಟ್ಟೈಯನ್ ಮತ್ತು ಸಚಿವ ಆಧವ್ ಅರ್ಜುನ್ ಅವರ ನಡುವೆ ಸಿಎಂ ಜೋಸೆಫ್ ವಿಜಯ್ ಕುಳಿತುಕೊಂಡಿದ್ದರು. ಶಾಸಕರು ಪರಸ್ಪರ ಚರ್ಚಿಸಲು ಕೆಲವೊಮ್ಮೆ ಸೀಟು ಬದಲಾಯಿಸುವುದು ಸಾಮಾನ್ಯ. ಆದರೆ, ಮುಖ್ಯಮಂತ್ರಿಗಳು ತಮ್ಮ ಅಧಿಕೃತ ಕುರ್ಚಿಯನ್ನು ಬಿಟ್ಟು, ಸಚಿವರೊಂದಿಗೆ ಕುಳಿತಿದ್ದು ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸದನದ ಆಸನ ವ್ಯವಸ್ಥೆ ಹೀಗಿದೆ:
234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಸಾಂಪ್ರದಾಯಿಕ ಆಸನ ವ್ಯವಸ್ಥೆ ಇದೆ. ಇದರ ಪ್ರಕಾರ ಸಿಎಂ ಸ್ಪೀಕರ್ ಬಳಿ ಪ್ರತ್ಯೇಕ ಆಸನದಲ್ಲಿ ಕೂರುತ್ತಾರೆ. ಮುಂಭಾಗದ ಸಾಲಿನಲ್ಲಿ ಸಚಿವರು ಹಿರಿತನದ ಆಧಾರದ ಮೇಲೆ ಕುಳಿತುಕೊಳ್ಳುತ್ತಾರೆ. ಆಡಳಿತ ಪಕ್ಷದ ಸೀಟುಗಳ ಎದುರು ವಿರೋಧ ಪಕ್ಷದ ನಾಯಕರು ಹಾಗೂ ಅವರ ಹಿಂದೆ ಪಕ್ಷದ ಶಾಸಕರು ಕುಳಿತುಕೊಳ್ಳುವುದು ಇಲ್ಲಿನ ನಿಯಮವಾಗಿದೆ.



