August 27, 2026
Thursday, August 27, 2026
spot_img

ದಾವಣಗೆರೆಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆಗೆ ಉದ್ಯೋಗಾಕಾಂಕ್ಷಿಗಳ ಆಗ್ರಹ

ಹೊಸದಿಗಂತ ವರದಿ ದಾವಣಗೆರೆ:

ರಾಜ್ಯ ಶಾಲಾ ಶಿಕ್ಷಣ ಇಲಾಖೆಯು ಪ್ರಕಟಿಸಿರುವ 15,000 ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ 5 ವರ್ಷಗಳ ವಯೋಮಿತಿ ಸಡಿಲಿಸುವ ಜೊತೆಗೆ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಗಣಿತ, ಹಿಂದಿ, ಉರ್ದು ಸೇರಿದಂತೆ ಬಿಟ್ಟುಹೋಗಿರುವ ವಿಷಯ ಶಿಕ್ಷಕರ ಹುದ್ದೆಗಳನ್ನು ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಹಾಗೂ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಉಪವಿಭಾಗಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

2026 ಜನವರಿ 29ರಂದು ರಾಜ್ಯ ಸರ್ಕಾರವೇ ಹೊರಡಿಸಿದ ರಾಜ್ಯಪತ್ರದ ಆದೇಶದ ಪ್ರಕಾರ 2027 ಡಿಸೆಂಬರ್ 31ರವರೆಗೆ ನಡೆಯುವ ಎಲ್ಲಾ ನೇರ ನೇಮಕಾತಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಬೇಕಿತ್ತು. ಬಹಳಷ್ಟು ಜನ ಅಭ್ಯರ್ಥಿಗಳು ಟಿಇಟಿ ಉತ್ತೀರ್ಣರಾಗಿ ಈಗ ಕೇವಲ ಒಂದು ವಾರ, 15 ದಿನ, ಒಂದು ತಿಂಗಳ ಅಂತರದಲ್ಲಿ ವಯೋಮಿತಿ ಮೀರುತ್ತಿದ್ದಾರೆ. ಇತ್ತೀಚೆಗೆ ಕೆಪಿಎಸ್ಸಿ ನಡೆಸಿದ ಗೆಜೆಟೆಡ್ ಪ್ರೊಬೇಷನರಿ ಹಾಗೂ ಕ್ರೈಸ್ ವಸತಿ ಶಾಲೆಗಳ ನೇಮಕಾತಿಗಳಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. ಅದೇ ಮಾದರಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲೂ ವಯೋಮಿತಿ ಸಡಿಲಿಸಬೇಕು ಎಂದು ಸಂಘಟನೆ ಮುಖಂಡರು ಆಗ್ರಹಿಸಿದರು.

ಸುಮಾರು 11 ವರ್ಷಗಳ ನಂತರ ನಡೆಯುತ್ತಿರುವ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಗಣಿತ, ಹಿಂದಿ, ಉರ್ದು ವಿಷಯಗಳ ಹುದ್ದೆಗಳನ್ನು ಕೈಬಿಟ್ಟಿರುವುದು ಬಿ.ಇಡಿ ಹಾಗೂ ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ಎಸಗಿದ ಅನ್ಯಾಯವಾಗಿದೆ. ಖಾಲಿ ಇರುವ ಹುದ್ದೆಗಳನ್ನು ಕೇವಲ ಬಡ್ತಿ ಮೂಲಕ ಭರ್ತಿ ಮಾಡಲು ಸಾಧ್ಯವಿಲ್ಲ. ತಕ್ಷಣವೇ ಈ ವಿಷಯಗಳ ಶಿಕ್ಷಕ ಹುದ್ದೆಗಳನ್ನು ನೇಮಕಾತಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಇದನ್ನೂ ಓದಿ:

ಎಐಡಿವೈಓ ಜಿಲ್ಲಾ ಸಂಚಾಲಕ ಪರಶುರಾಮ್, ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಜಿಲ್ಲಾ ಸಂಘಟನಾಕಾರರಾದ ಅನಿಲ್ ಕುಮಾರ್, ಶಶಿಕುಮಾರ್, ವಿಶ್ವನಾಥ್, ದಾದಾಪೀರ್, ಪ್ರಶಾಂತ್, ಗುರುಪ್ರಸಾದ್, ಮಂಜುನಾಥ್, ಉಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !