ಹೊಸದಿಗಂತ ವರದಿ ಚಿತ್ರದುರ್ಗ:
ರೈಲ್ವೆ ಸಚಿವ ವಿ.ಸೋಮಣ್ಣ ಆ.30 ರ ಭಾನುವಾರ ರೈಲ್ವೆ ಮೇಲು ಸೇತುವೆಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವರು ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾನುವಾರ ಬೆಳಗ್ಗೆ 11:15 ಕ್ಕೆ ನಗರಕ್ಕೆ ಆಗಮಿಸುವ ಸಚಿವರು ಚಿತ್ರದುರ್ಗ ನಗರದಲ್ಲಿ ರೈಲ್ವೆ ಸ್ಟೇಷನ್ ಬಳಿಯಿರುವ ಮೇಲು ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದರಂತೆ ಮಧ್ಯಾಹ್ನ 2ಗಂಟೆಗೆ ಚಿಕ್ಕಜಾಜೂರು ನಗರಕ್ಕೆ ಹೊಂದಿಕೊಂಡಿರುವ ರೈಲ್ವೆ ಮೇಲು ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವರು.

ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಮುಖವಾಗಿ ಮೂರು ಜಾಗದಲ್ಲಿ ರೈಲ್ವೆ ಮೇಲುಸೇತುವೆ ನಿರ್ಮಾಣವಾಗಬೇಕೆಂಬುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಚಿತ್ರದುರ್ಗ ನಗರದಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ 22 ಕ್ಕೆ ಮೇಲು ಸೇತುವೆ ಹಾಗೂ ಹೊಳಲ್ಕೆರೆ ತಾಲ್ಲೂಯಕಿನ ಚಿಕ್ಕಜಾಜೂರು ಬಳಿ ರೈಲ್ವೆ ಗೇಟ್ 01 ಕ್ಕೆ ಮೇಲು ಸೇತುವೆ ನಿರ್ಮಾಣ ಹಾಗೂ ಹಳಿಯೂರು ಬಳಿ ರೈಲ್ವೆ ಲೆವೆಲ್ ಕಾಸ್ರಿಂಗ್15 ಕ್ಕೆ ಮೇಲು ಸೇತುವೆ ನಿರ್ಮಾಣವಾಗಬೇಕೆಂಬುದು ಬಹುವರ್ಷಗಳ ಬೇಡಿಕೆಯಾಗಿತ್ತು.
ಸಂಸದರ ಸತತ ಪ್ರಯತ್ನದ ಫಲವಾಗಿ ರೈಲ್ವೆ ಸಚಿವಾಲಯ ಚಿತ್ರದುರ್ಗ ನಗರದ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ 32.51 ಕೋಟಿ ರೂ. ಹಾಗೂ ಚಿಕ್ಕಜಾಜೂರು ರೈಲ್ವೆ ಮೇಲುಸೇತುವೆ ನಿರ್ಮಾಣಕ್ಕೆ 25.15 ಕೋಟಿ ರೂ. ಅನುದಾನ ನೀಡಿ ಟೆಂಡರ್ ಪ್ರಕ್ರಿಯೆಯನ್ನೂ ಸಹ ಪೂರ್ಣಗೊಳಿಸಿದೆ. ಉಳಿದಂತೆ ಹಳಿಯೂರು ಬಳಿ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಭೂ-ಸ್ವಾಧೀನದ ಅವಶ್ಯಕತೆಯಿದ್ದು ಪ್ರಕ್ರಿಯೆ ಪ್ರಗತಿಯಲ್ಲಿದೆ.
ಇದನ್ನೂ ಓದಿ:
ಈ ಎರಡೂ ಮೇಲು ಸೇತುವೆಗಳ ಭೂಮಿಪೂಜೆ ನೆರವೇರಿಸಲು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭಾನುವಾರ ನಗರಕ್ಕೆ ಆಗಮಿಸಿ ಮೇಲು ಸೇತುವೆಗಳ ಭೂಮಿಪೂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.



