August 27, 2026
Thursday, August 27, 2026
spot_img

ಭದ್ರಾ ಜಲಾಶಯದಿಂದ ಕಡೂರು, ತರೀಕೆರೆ ಕೆರೆಗಳಿಗೆ ನೀರು ಹರಿಸಲು ವಿರೋಧ: ರೈತ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ

ಹೊಸದಿಗಂತ ವರದಿ ದಾವಣಗೆರೆ:

ಭದ್ರಾ ಮೇಲ್ದಂಡೆ, ವಾಣಿವಿಲಾಸ ಸಾಗರ, ಕಡೂರು, ತರೀಕೆರೆ ಕೆರೆಗಳಿಗೆ ಭದ್ರಾ ಜಲಾಶಯದಿಂದ ನೀರು ಬಿಡುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಗುರುವಾರ ಭಾರತೀಯ ರೈತ ಒಕ್ಕೂಟದಿಂದ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ನದಿಯಿಂದ ಭದ್ರಾ ಡ್ಯಾಂ ಗೆ ನೀರು ಲಿಫ್ಟ್ ಮಾಡಿ, ತುಂಬಿಸಿದ ನಂತರವೇ ಹರಿಸಬೇಕು. ಯಾವುದೋ ಒತ್ತಡಕ್ಕೆ, ಹಿರಿಯೂರು ಉಪ ಚುನಾವಣೆ ಕಾರಣಕ್ಕೆ ಭದ್ರಾ ಡ್ಯಾಂ ನಿಂದ 3 ಟಿಎಂಸಿ ನೀರು ಹರಿಸಲು ಸರ್ಕಾರ ಆದೇಶ ಹೊರಡಿಸಿದ್ದು ಸರಿಯಲ್ಲ. ತಕ್ಷಣವೇ ನೀರು ಬಿಡುವ ಆದೇಶ ಹಿಂಪಡೆಯಬೇಕು. ವಾಣಿವಿಲಾಸ ಸಾಗರ, ಕಡೂರು, ತರೀಕೆರೆ ತಾಲೂಕುಗಳ ಕೆರೆಗಳನ್ನು ತುಂಬಿಸಿ, ಬೆಳೆ ಬೆಳೆಯಲು 5.97 ಟಿಎಂಸಿ ನೀರನ್ನು ಬಿಟ್ಟರೆ, ಭದ್ರಾ ಡ್ಯಾಂನ ಅಚ್ಚುಕಟ್ಟು ರೈತರಿಗೆ ಘೋರ ಅನ್ಯಾಯವಾಗುತ್ತದೆ ಎಂದು ಒಕ್ಕೂಟದ ಮುಖಂಡರು ದೂರಿದರು.

ಮಳೆ ಕೈಕೊಟ್ಟು, ಬರ ಆವರಿಸಿರುವ ಸಂದರ್ಭದಲ್ಲಿ ಭದ್ರಾ ಡ್ಯಾಂ ನಲ್ಲಿರುವ 176 ಅಡಿ ನೀರಿನಲ್ಲೇ 3 ಟಿಎಂಸಿ ನೀರು ಬಿಡುವಂತೆ ಸರ್ಕಾರ ಆದೇಶ ಹೊರಡಿಸಿದ್ದು ಮಧ್ಯ ಕರ್ನಾಟಕದ ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಚಿಕ್ಕಮಗಳೂರು ಜಿಲ್ಲೆ ಮುತ್ತಿನಕೊಪ್ಪದ ಬಳಿ ತುಂಗಾ ನದಿ ನೀರಿನಲ್ಲಿ 17.41 ಟಿಎಂಸಿ ನೀರನ್ನು ಎತ್ತಿ, ಭದ್ರಾ ಡ್ಯಾಂ ಗೆ ತುಂಬಿಸಿದ ನಂತರವೇ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶದ 2.65 ಲಕ್ಷ ಎಕರೆ ರೈತರ ಜಮೀನುಗಳಿಗೆ ತೀವ್ರ ತೊಂದರೆಯಾಗುತ್ತದೆ. ಡ್ಯಾಂ ತುಂಬಿ ಹರಿಯುವಾಗ ವ್ಯರ್ಥ ನೀರನ್ನು ಬೇಕಿದ್ದರೆ ಮೇಲ್ದಂಡೆಗೆ ಹರಿಸಲಿ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಕ್ಷಣವೇ ಆದೇಶ ಹಿಂಪಡೆಯದಿದ್ದರೆ ಮುಂದಾಗುವ ತೊಂದರೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್.ಲಿಂಗರಾಜ, ಮುಖಂಡರಾದ ಆವರಗೊಳ್ಳ ಬಿ.ಎಂ.ಷಣ್ಮುಖಯ್ಯ, ಬೆಳವನೂರು ಬಿ.ನಾಗೇಶ್ವರರಾವ್, ಮಾಜಿ ಮೇಯರ್ ಹೆಚ್.ಎನ್.ಗುರುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಹೆಚ್.ಜಿ.ಗಣೇಶಪ್ಪ, ಎ.ಎಂ.ಮಂಜುನಾಥ, ಕುಂದುವಾಡ ಹನುಮಂತಪ್ಪ, ಎ.ಅಣ್ಣಪ್ಪ, ಎ.ಆರ್.ಸಿದ್ದೇಶ, ಶ್ರೀನಿವಾಸ ಬಾತಿ, ಎಂ.ಹನುಮಂತಪ್ಪ, ಮಹೇಂದ್ರಪ್ಪ, ಮಹೇಶ, ಪುನೀತ, ಚಂದ್ರಶೇಖರ ಪೂಜಾರ್, ಕಲ್ಪನಹಳ್ಳಿ ಉಜ್ಜಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !