ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಸೋಷಿಯಲ್ ಮೀಡಿಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಮನೆಯ ಓಣಂ ಹಬ್ಬದ ಫೋಟೋವೊಂದು ಭಾರಿ ವೈರಲ್ ಆಗುತ್ತಿದೆ. ಕುಟುಂಬದವರ ಜತೆ ಹಬ್ಬದ ಊಟ ಸವಿಯುತ್ತಿರುವ ಈ ಕ್ಯೂಟ್ ಫೋಟೋವನ್ನು ಸ್ವತಃ ಸಚಿನ್ ಅವರೇ ಪೋಸ್ಟ್ ಮಾಡಿದ್ದಾರೆ. ವಿಶೇಷ ಎಂದರೆ, ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಊಟದ ಟೇಬಲ್ ಕೆಳಗೆ ಒಂದು ಮುದ್ದಾದ ನಾಯಿಮರಿಯ ತುಂಟಾಟ ಕಾಣುತ್ತದೆ.
ಕ್ಯೂಟ್ ಫೋಟೋ ಹಂಚಿಕೊಂಡ ಸಚಿನ್
ಸಚಿನ್ ಹಂಚಿಕೊಂಡಿರುವ ಫೋಟೋದಲ್ಲಿ ತಮ್ಮ ಕುಟುಂಬದವರು ಮತ್ತು ಆಪ್ತರೊಂದಿಗಿರುವ ಕಾಣಿಸಿಕೊಂಡಿದ್ದಾರೆ. ಎಲ್ಲರೂ ಹಬ್ಬದ ಊಟ ಮತ್ತು ಒಟ್ಟಿಗೆ ಸೇರಿದ ಸಂಭ್ರಮದಲ್ಲಿದ್ದರೆ, ಸಚಿನ್ ಅವರ ಮುದ್ದಿನ ನಾಯಿ ‘ಬೌನ್ಸರ್’ ಮಾತ್ರ ಯಾರಿಗೂ ತಿಳಿಯದಂತೆ ಟೇಬಲ್ ಕೆಳಗೆ ಸುಮ್ಮನೆ ಅಡಗಿ ಕುಳಿತುಕೊಂಡಿತ್ತು.
ಈ ಫೋಟೋವನ್ನು ಪೋಸ್ಟ್ ಮಾಡಿದ ಸಚಿನ್, “ಹಬ್ಬದ ಅದ್ಭುತ ಊಟದಲ್ಲಿ ಬ್ಯುಸಿಯಾಗಿದ್ದರಿಂದ ಪೋಸ್ಟ್ ಮಾಡುವುದು ತಡವಾಯಿತು. ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು. ಫೋಟೋದಲ್ಲಿ ಬೌನ್ಸರ್ ಎಲ್ಲಿದ್ದಾನೆ ಎಂದು ಪತ್ತೆಹಚ್ಚುವವರಿಗೆ ಒಂದು ಹೆಚ್ಚುವರಿ ಸ್ವೀಟ್ ಸಿಗಲಿದೆ! ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಅಭಿಮಾನಿಗಳ ಮನಗೆದ್ದ ಬೌನ್ಸರ್
ಟೇಬಲ್ ಕೆಳಗೆ ಅಡಗಿದ್ದ ಬೌನ್ಸರ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಊಟದ ಸಮಯದಲ್ಲಿ ಸಾಕುಪ್ರಾಣಿಗಳು ಹೀಗೆ ಮಾಲೀಕರ ಜತೆ ಇರಲು ಬಯಸುವುದು ಅವುಗಳ ಸಹಜ ಸ್ವಭಾವ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಸಚಿನ್ ಕುಟುಂಬಕ್ಕೆ ಹಬ್ಬದ ಶುಭಾಶಯ ಕೋರಿದ್ದು, ಸದ್ಯ ಈ ಫೋಟೋ ಸಖತ್ ವೈರಲ್ ಆಗಿದೆ.



