ಹೊಸದಿಗಂತ ವರದಿ ರಾಮನಗರ:
ತಾಯಿಯಿಂದ ಬೇರಾಗಿರುವ 4 ದಿನಗಳ ಚಿರತೆ ಮರಿ ಮತ್ತೆ ತಾಯಿಯ ಮಡಿಲು ಸೇರುವ ವರೆಗೆ ಅದರ ಸುರಕ್ಷತೆ ಮತ್ತು ಪಾಲನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.
ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದ ನಾಗೇಶ್ ಎಂಬುವರ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ಸಮಯದಲ್ಲಿ ಕಬ್ಬಿನಗದ್ದೆಯ ಮಧ್ಯಭಾಗದಲ್ಲಿ 4 ಚಿರತೆ ಮರಿಗಳು ಪತ್ತೆಯಾಗಿದ್ದವು. ಈ ಚಿರತೆ ಮರಿಗಳು ಮತ್ತೆ ತಾಯಿಯ ಮಡಿಲು ಸೇರುವವರೆಗೆ ಮರಿಗಳಿಗೆ ಯಾವುದೇ ಹಾನಿಯಾಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ನಿಗಾವಹಿಸಿದ್ದರು. ಇದಕ್ಕಾಗಿ ಚಿರತೆ ಕಾರ್ಯಪಡೆಯ ಸಿಬ್ಬಂದಿಗಳನ್ನು ನಿಯೋಜಿಸಿ ಚಿರತೆಮರಿಗಳು ಸುರಕ್ಷಿಯವಾಗಿ ತಾಯಿಯ ಮಡಿಲು ಸೇರುವಂತೆ ಕ್ರಮವಹಿಸಲಾಗಿತ್ತು.
4 ಚಿರತೆ ಮರಿಗಳ ಪೈಕಿ ಮೂರು ಚಿರತೆ ಮರಿಗಳನ್ನು ತಾಯಿಚಿರತೆ ಸುರಕ್ಷಿತ ಪ್ರದೇಶಕ್ಕೆ ಕರೆದುಕೊಂಡು ಹೋಗಿದೆ. ಬೆಳಕಾದ ಕಾರಣ ಒಂದು ಚಿರತೆ ಮರಿಯನ್ನು ಕಬ್ಬಿನ ಗದ್ದೆಯಲ್ಲೇ ಬಿಟ್ಟು ಹೋಗಿತ್ತು. ಒಂಟಿ ಮರಿ ಕಬ್ಬಿನ ಗದ್ದೆಯಲ್ಲಿ ಇರುವುದನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಮತ್ತೆ ಈ ಮರಿ ತಾಯಿ ಮಡಿಲು ಸೇರುವ ವರೆಗೆ ಕಾವಲು ಕಾಯುತ್ತಿದ್ದಾರೆ.
ಮೇಕೆ ಹಾಲಿನ ಪೋಷಣೆ
ಇನ್ನು ಒಂಟಿಯಾಗಿ ಉಳಿದಿರುವ ಚಿರತೆ ಮರಿ ಹಸಿವಿನಿಂದ ಸಾಯುವ ಸಂಭವವಿದ್ದ ಕಾರಣ ಮೇಕೆ ಹಾಲನ್ನು ತರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಚಿರತೆ ಮರಿಗೆ ಕುಡಿಸಿದ್ದಾರೆ. ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆಯ ತಂಡ ಕಣ್ಗಾವಲು ಮುಂದುವರೆಸಿದ್ದು, ಗುರುವಾರ ರಾತ್ರಿ ತಾಯಿ ಚಿರತೆ ಈ ಮರಿಯನ್ನು ತೆಗೆದುಕೊಂಡು ಹೋಗಬಹುದು ಎಂಬ ನಿರೀಕ್ಷೆಯಲ್ಲಿ ಒಂಟಿ ಚಿರತೆ ಮರಿಯನ್ನು ಹಾರೈಕೆ ಮಾಡುತ್ತಿದ್ದಾರೆ.
ಒಂಟಿಯಾಗಿ ಉಳಿದಿರುವ ಈ ಚಿರತೆ ಮರಿಯನ್ನು ತಾಯಿ ಚಿರತೆ ತೆಗೆದುಕೊಂಡು ಹೋಗಲಿದೆ ಎಂದು ಮಾಹಿತಿ ನೀಡಿರುವ ಅರಣ್ಯ ಇಲಾಖೆ ಸಿಬ್ಬಂದಿ ಒಂದು ವೇಳೆ ಮರಿಯನ್ನು ತೆಗೆದುಕೊಂಡು ಹೋಗದೆ ಇದ್ದಲ್ಲಿ ಬನ್ನೇರು ಘಟ್ಟ ಅರಣ್ಯ ಪ್ರದೇಶಕ್ಕೆ ರವಾನಿಸುವುದಾಗಿ ಮಾಹಿತಿ ನೀಡಿದ್ದಾರೆ.
ಚಿರತೆ ಮರಿಗೆ ಯಾವುದೇ ಸಮಸ್ಯೆಯಾಗದಂತೆ ನಮ್ಮ ಇಲಾಖಾ ಸಿಬ್ಬಂದಿ ನಿಗಾವಹಿಸಿದ್ದಾರೆ ಎಂದು ಚನ್ನಪಟ್ಟಣ ಆರ್ಎಫ್ಒ ಮಲ್ಲೇಶ್ ತಿಳಿಸಿದ್ದಾರೆ.



