ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರತಿಯೊಬ್ಬರಿಗೂ ಬ್ಯಾಂಕಿಂಗ್ ಸೌಲಭ್ಯ ತಲುಪಿಸುವ ಉದ್ದೇಶದಿಂದ 2014ರಲ್ಲಿ ಶುರುವಾದ ಕ್ರಾಂತಿ ಈ ಪ್ರಧಾನಮಂತ್ರಿ ಜನಧನ್ ಯೋಜನೆ ಈಗ ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಹೌದು! ಕಳೆದ 12 ವರ್ಷಗಳಲ್ಲಿ ಈ ಜನಧನ್ ಯೋಜನೆಯಡಿ ತೆರೆಯಲಾಗಿದ್ದ ಬ್ಯಾಂಕ್ ಖಾತೆಗಳ ಸಂಖ್ಯೆ ಈಗ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.
ಖಾತೆಗಳ ಸಂಖ್ಯೆ 59.09 ಕೋಟಿಗೆ ಭರ್ಜರಿ ಏರಿಕೆ
ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (PIB) ಈ ವರದಿಯನ್ನು ಬಿಡುಗಡೆ ಮಾಡಿದ್ದು, 2015ರಲ್ಲಿ 14.72 ಕೋಟಿ ಇದ್ದ ಜನಧನ್ ಖಾತೆಗಳ ಸಂಖ್ಯೆ, ಆಗಸ್ಟ್ 19, 2026ರ ವೇಳೆಗೆ 59.09 ಕೋಟಿಗೆ ಭರ್ಜರಿ ಏರಿಕೆಯಾಗಿದೆ.
ಇದನ್ನೂ ಓದಿ:
ಈ ಯೋಜನೆ ಶುರುವಾಗಿದ್ದು ಕೇವಲ ಪ್ರತಿಯೊಂದು ಕುಟುಂಬಕ್ಕೂ ಕನಿಷ್ಠ ಒಂದು ಬ್ಯಾಂಕ್ ಖಾತೆ ಇರಬೇಕು ಎನ್ನುವ ಕಾರಣಕಕ್ಕೆ ಆದ್ರೆ ಈಗ ಈ ಯೋಜನೆಯ ವ್ಯಾಪ್ತಿಯು ಬಹಳಷ್ಟು ವಿಸ್ತಾರವಾಗಿದ್ದು, ಜನಧನ್ ಯೋಜನೆ ಈಗ ಕಡಿಮೆ ಆದಾಯದ ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಮೂಲಭೂತ ಬ್ಯಾಂಕಿಂಗ್ ಸೇವೆಗಳು, ಕ್ರೆಡಿಟ್, ಹಣ ರವಾನೆ, ವಿಮೆ ಮತ್ತು ಪಿಂಚಣಿ ಉತ್ಪನ್ನಗಳಿಗೆ ಪ್ರಮುಖ ಆಧಾರವಾಗಿ ಮಾರ್ಪಟ್ಟಿದೆ.
ಕನಿಷ್ಠ ಬ್ಯಾಲೆನ್ಸ್ ಇಷ್ಟೇ ಇರಬೇಕೆಂದೇನಿಲ್ಲ
ಈ ಜನಧನ್ ಖಾತೆಯ ಒಂದು ವಿಶೇಷ ಅಂದ್ರೆ ಇದರಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ. ಖಾತೆಗಳನ್ನು ಬ್ಯಾಂಕ್ ಶಾಖೆಯಲ್ಲಿ ಅಥವಾ ಬಿಸಿನೆಸ್ ಕರೆಸ್ಪಾಂಡೆಂಟ್ ಅಥವಾ ಬ್ಯಾಂಕ್ ಮಿತ್ರ ಔಟ್ಲೆಟ್ ಮೂಲಕ ತೆರೆಯಬಹುದು. ಜಂಟಿ ಖಾತೆಗಳನ್ನು ಸಹ ತೆರಯುವ ಅನುಮತಿ ನೀಡಲಾಗಿದೆ.
ಒಟ್ಟಾರೆಯಾಗಿ ಪ್ರಧಾನಮಂತ್ರಿ ಜನಧನ್ ಯೋಜನೆಯಡಿ ಖಾತೆಗಳ ಸಂಖ್ಯೆ 59 ಕೋಟಿಗೂ ಅಧಿಕವಾಗಿರುವುದು ದೇಶದಲ್ಲಿ ಹಣಕಾಸು ಒಳಗೊಳ್ಳುವಿಕೆ ಮತ್ತಷ್ಟು ವಿಸ್ತರಿಸಿರುವುದಕ್ಕೆ ಸಾಕ್ಷಿಯಾಗಿದೆ. ಬ್ಯಾಂಕಿಂಗ್ ಸೇವೆಗಳಿಂದ ದೂರವಿದ್ದ ಜನರನ್ನು ಅಧಿಕೃತ ಹಣಕಾಸು ವ್ಯವಸ್ಥೆಯೊಂದಿಗೆ ಸಂಪರ್ಕಿಸುವಲ್ಲಿ ಯೋಜನೆ ಮಹತ್ವದ ಪಾತ್ರ ವಹಿಸಿದ್ದು, ಮುಂದಿನ ದಿನಗಳಲ್ಲೂ ಇದರ ವ್ಯಾಪ್ತಿ ಮತ್ತಷ್ಟು ಹೆಚ್ಚಾಗೋ ನಿರೀಕ್ಷೆಯಿದೆ.



