August 28, 2026
Friday, August 28, 2026
spot_img

ನೇಪಾಳ ಪ್ರವಾಹದಲ್ಲಿ 320 ಭಾರತೀಯರು ನಾಪತ್ತೆ: 21 ಮಂದಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳ ಮತ್ತು ಟಿಬೆಟ್ ಗಡಿಭಾಗದ ಭೋಟಿ ಕೋಶಿ ಹಾಗೂ ತ್ರಿಶೂಲಿ ನದಿ ಪಾತ್ರಗಳಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ಹಲವರು ಸಂಕಷ್ಟಕ್ಕೆ ಸಿಲುಕಿದ್ದು, ಭಾರತೀಯರ ರಕ್ಷಣಾ ಕಾರ್ಯಾಚರಣೆ ತೀವ್ರ ಗತಿಯಲ್ಲಿ ಮುಂದುವರಿದಿದೆ.

ವಿದೇಶಾಂಗ ಸಚಿವಾಲದ ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಮಾಹಿತಿ ನೀಡಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರಲ್ಲಿ ಕೆಲವರನ್ನು ರಕ್ಷಿಸಲಾಗಿದ್ದು, ಇನ್ನೂ ನೂರಾರು ಮಂದಿಯ ಜೊತೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಪ್ರವಾಹ ಪೀಡಿತ ಪ್ರದೇಶದಿಂದ ರಕ್ಷಿಸಲ್ಪಟ್ಟ ತಮಿಳುನಾಡಿನ 21 ಮಂದಿಯನ್ನು ಕಠ್ಮಂಡುವಿನಿಂದ ದೆಹಲಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಇವರ ಜೊತೆಗೆ ನೇಪಾಳದ ತ್ರಿಶೂಲಿ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 63 ಭಾರತೀಯರನ್ನೂ ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಚೀನಾದ ಭಾಗದಲ್ಲಿ ಸಿಲುಕಿಕೊಂಡಿರುವ 96 ಮಂದಿಯನ್ನು ಭೂ ಮಾರ್ಗದ ಮೂಲಕ ನೇಪಾಳ ಪ್ರವೇಶಿಸಿದ್ದಾರೆ. ಆದರೆ ಇನ್ನೂ 320 ಭಾರತೀಯರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಜೈಸ್ವಾಲ್ ಹೇಳಿದ್ದಾರೆ.

ರಕ್ಷಿಸಲ್ಪಟ್ಟ ಯಾತ್ರಿಕರನ್ನು ಭೇಟಿಯಾದ ಜೈಶಂಕರ್

ಈ ನಡುವೆ ನವದೆಹಲಿಗೆ ಮರಳಿದ ತಮಿಳುನಾಡಿನ 21 ಯಾತ್ರಿಕರನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭೇಟಿ ಮಾಡಿ ಪ್ರವಾಹದ ವೇಳೆ ಎದುರಿಸಿದ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಾವಿನ ಸಂಖ್ಯೆ 538ಕ್ಕೆ ಏರಿಕೆ

ಭೀಕರ ಪ್ರವಾಹದಿಂದ ಸಾವಿನ ಸಂಖ್ಯೆ 538ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ಸುಮಾರು 977 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಈವರೆಗೆ 85 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದ್ದು, ನಾಪತ್ತೆಯಾಗಿರುವ ಭಾರತೀಯರ ಪತ್ತೆ ಹಾಗೂ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.

ನೇಪಾಳದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ನೇಪಾಳದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸುತ್ತಿದೆ. ನಾಪತ್ತೆಯಾಗಿರುವ ಭಾರತೀಯರ ಮಾಹಿತಿ ಪತ್ತೆಹಚ್ಚಿ, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪ್ರಯತ್ನಗಳು ಮುಂದುವರಿದಿವೆ. ಪರಿಸ್ಥಿತಿ ಸುಧಾರಿಸುವವರೆಗೆ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !