August 28, 2026
Friday, August 28, 2026
spot_img

ಪರ್ತಗಾಳಿಯ ಶ್ರೀರಾಮನಿಗೆ ವಿಶ್ವದಾಖಲೆಯ ಗೌರವ: ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು

ಹೊಸದಿಗಂತ ವರದಿ ​ಗೋಕರ್ಣ:

ಪರ್ತಗಾಳಿಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಆದರ್ಶ ಧಾಮದಲ್ಲಿ ಸ್ಥಾಪಿಸಲಾಗಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭವ್ಯ ಕಂಚಿನ ಪ್ರತಿಮೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ದೊರೆತಿದೆ. 78.74 ಅಡಿ (24 ಮೀಟರ್) ಎತ್ತರದ ಈ ಪ್ರತಿಮೆ ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂಬ ದಾಖಲೆಗೆ ಪಾತ್ರವಾಗಿದೆ.

ಈ ಗೌರವವನ್ನು ಹಿರಿಯ ಗುರುಗಳಿಗೆ ಸಮರ್ಪಿಸುವುದಾಗಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮ ಪೂಜ್ಯ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು. ಹಿರಿಯ ಗುರುಗಳ ಕೃಪೆ, ಆಶೀರ್ವಾದ ಮತ್ತು ಮಾರ್ಗದರ್ಶನದಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

ದಾಖಲೆ ಪ್ರಮಾಣಪತ್ರಗಳ ಹಸ್ತಾಂತರ

ಪರಮ ಗುರು ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ 82ನೇ ಜನ್ಮತಿಥಿ ಅಂಗವಾಗಿ ಆಗಸ್ಟ್ 27ರಂದು ನಡೆದ ಕಾರ್ಯಕ್ರಮದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನ ಅಧಿಕೃತ ತೀರ್ಪುಗಾರ್ತಿ ಡಾ. ಚಿತ್ರಾ ಜೈನ್ ಅವರು ದಾಖಲೆ ಪ್ರಮಾಣಪತ್ರಗಳನ್ನು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು.

ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿರುವ ಪ್ರತಿಮೆಯು ಪೀಠದಿಂದ 78.74 ಅಡಿ (24 ಮೀಟರ್) ಎತ್ತರ ಹೊಂದಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2025ರ ನವೆಂಬರ್ 28ರಂದು ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದರು. ಖ್ಯಾತ ಶಿಲ್ಪಿ ಪದ್ಮಭೂಷಣ ದಿವಂಗತ ರಾಮ್ ಸುತಾರ್ ಹಾಗೂ ಅವರ ಪುತ್ರ ಅನಿಲ್ ಸುತಾರ್ ಅವರು ಪ್ರತಿಮೆಯನ್ನು ರೂಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಹಿರಿಯ ಗುರುಗಳು ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿ ಹಲವು ಶಾಖಾ ಮಠಗಳನ್ನು ಸ್ಥಾಪಿಸಿದ್ದರು. ಮಠ-ಮಂದಿರಗಳ ಜೀರ್ಣೋದ್ಧಾರ, ಧಾರ್ಮಿಕ ಯಾತ್ರೆಗಳು, ವಿವಿಧ ಧಾರ್ಮಿಕ ಆಚರಣೆಗಳು ಹಾಗೂ ಸಮಾಜಮುಖಿ ಕಾರ್ಯಗಳಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಇದನ್ನೂ ಓದಿ:

550 ಕೋಟಿ ಶ್ರೀರಾಮನಾಮ ಜಪ

ಇದೇ ವೇಳೆ ಪರ್ತಗಾಳಿ ಮಠದ 550ನೇ ವರ್ಷಾಚರಣೆ ಅಂಗವಾಗಿ 550 ಕೋಟಿ ಶ್ರೀರಾಮನಾಮ ಜಪ ಸಂಪನ್ನಗೊಳಿಸಿದ್ದಕ್ಕಾಗಿ GSB ಸಮುದಾಯದ ಹೆಸರಿನಲ್ಲಿ 2025ರ ನವೆಂಬರ್ 30ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿರುವುದನ್ನೂ ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಠ್ಠಲ ಮಾಸ್ತರ ಗೌರವ ಪುರಸ್ಕಾರವನ್ನು ರಾಮಚಂದ್ರ ಪದ್ಮನಾಭ ಭಟ್ಟ ಗಾಂವ್ಕರ ಅವರಿಗೆ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು.

ಮಠದ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ದೆಂಪೊ, ಗೋವಾ ಲೋಕೋಪಯೋಗಿ ಸಚಿವ ದಿಗಂಬರ ಕಾಮತ, ಚಾತುರ್ಮಾಸ್ಯ ವ್ರತ ಸಮಿತಿ ಅಧ್ಯಕ್ಷ ಅನಿಲ್ ಪೈ ಸೇರಿದಂತೆ ಸಮಿತಿ ಸದಸ್ಯರು, ಜೀವೋತ್ತಮ ವಿದ್ಯಾಪೀಠದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಪಾರ ಸಂಖ್ಯೆಯ ಶಿಷ್ಯವರ್ಗ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !