August 30, 2026
Sunday, August 30, 2026
spot_img

ಕೇವಲ 500ಕ್ಕೆ ಡಯಾಲಿಸಿಸ್ ಸೇವೆ: ಡಾ. ರವಿ ಪಾಟೀಲ ಆಸ್ಪತ್ರೆಯಲ್ಲಿ ನೂತನ ನೆಫ್ರೋ-ಯುರಾಲಜಿ ಘಟಕ ಉದ್ಘಾಟನೆ

ಹೊಸದಿಗಂತ ವರದಿ ಬೆಳಗಾವಿ:

ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಡಾ. ರವಿ ಪಾಟೀಲ ಅವರ ನೇತೃತ್ವದ ಆರೋಗ್ಯ ಸಂಸ್ಥೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಸಾಂಬ್ರಾ ಏರ್ಪೋರ್ಟ್ ರಸ್ತೆಯಲ್ಲಿರುವ ಡಾ. ರವಿ ಪಾಟೀಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನ ನೆಫ್ರೋ-ಯುರಾಲಜಿ (ಕಿಡ್ನಿ ಹಾಗೂ ಮೂತ್ರಶಾಸ್ತ್ರ) ಘಟಕ ಭಾನುವಾರ ಡಾ. ಪ್ರಭಾಕರ್ ಕೋರೆ ನೇತ್ರತ್ವದಲ್ಲಿ ಉದ್ಘಾಟನೆಗೊಂಡಿತು.

ನೂತನ್ ಆಸ್ಪತ್ರೆಯ ಉದ್ಘಾಟನೆ ಗೊಳಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಓಎನ್ಸಿಸಿ ಸಂಸ್ಥೆಯಲ್ಲಿ ವಿವಿಧ ಕಾಯಿಲೆಗಳಿಗೆ ಒಂದೇ ಸೂರಿನಡಿ ಅತ್ಯಾಧುನಿಕ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಡಾ. ರವಿ ಪಾಟೀಲ ತಿಳಿಸಿದರು.

“ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಉಚಿತ ವೈದ್ಯಕೀಯ ಸಮಾಲೋಚನೆ ನೀಡಲಾಗುತ್ತಿದೆ. ರೋಗಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸಬ್ಸಿಡಿ ದರದಲ್ಲಿ ಕೇವಲ ₹500ಕ್ಕೆ ಡಯಾಲಿಸಿಸ್ ಸೇವೆ ಆರಂಭಿಸಲಾಗಿದೆ” ಎಂದು ಹೇಳಿದರು.

24 ಗಂಟೆಯೂ ಡಯಾಲಿಸಿಸ್ ಸೇವೆ: ಹೊಸ ಘಟಕದಲ್ಲಿ ಡಯಾಲಿಸಿಸ್ ಸೇವೆ 24/7 ಲಭ್ಯವಿರಲಿದೆ. ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಡಯಾಲಿಸಿಸ್ ಅಗತ್ಯವಿರುವ ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ದೊರಕಿಸುವುದು ಘಟಕದ ಪ್ರಮುಖ ಉದ್ದೇಶವಾಗಿದೆ.

ವಿವಿಧ ವಿಭಾಗಗಳ ತಜ್ಞರ ಸೇವೆ :

ಆಸ್ಪತ್ರೆಯಲ್ಲಿ ನೆಫ್ರಾಲಜಿಸ್ಟ್, ಯುರಾಲಜಿಸ್ಟ್, ನ್ಯೂರೋಸರ್ಜನ್, ಪ್ಲಾಸ್ಟಿಕ್ ಸರ್ಜನ್, ಫಿಸಿಷಿಯನ್ ಹಾಗೂ ಜನರಲ್ ಸರ್ಜನ್ ಸೇರಿದಂತೆ ವಿವಿಧ ವೈದ್ಯಕೀಯ ವಿಭಾಗಗಳ ಅನುಭವಿ ತಜ್ಞರು ಸೇವೆಗೆ ಲಭ್ಯವಿದ್ದಾರೆ. ಇದರಿಂದ ಕಿಡ್ನಿ ಮತ್ತು ಮೂತ್ರಶಾಸ್ತ್ರ ಸಂಬಂಧಿತ ಸಮಸ್ಯೆಗಳಿಗೆ ಸಮಗ್ರ ಚಿಕಿತ್ಸಾ ವ್ಯವಸ್ಥೆ ದೊರೆಯಲಿದೆ.

ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ:

ತರಬೇತಿ ಪಡೆದ ಡಯಾಲಿಸಿಸ್ ಟೆಕ್ನಾಲಜಿಸ್ಟ್‌ಗಳು, ನುರಿತ ನರ್ಸಿಂಗ್ ಸಿಬ್ಬಂದಿ, ಸುಸಜ್ಜಿತ ಐಸಿಯು ಹಾಗೂ ಆಧುನಿಕ ಆಪರೇಷನ್ ಥಿಯೇಟರ್ ಸೇರಿದಂತೆ ಅಗತ್ಯ ವೈದ್ಯಕೀಯ ಮೂಲಸೌಕರ್ಯಗಳನ್ನು ಆಸ್ಪತ್ರೆಯಲ್ಲಿ ಕಲ್ಪಿಸಲಾಗಿದೆ.

ಹೆಚ್ಚುತ್ತಿರುವ ಕಿಡ್ನಿ ಕಾಯಿಲೆ: ಸಮಯೋಚಿತ ಹೆಜ್ಜೆ

 ದೇಶದಲ್ಲಿ ಕಿಡ್ನಿ ವೈಫಲ್ಯದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೈಗೆಟುಕುವ ದರದಲ್ಲಿ ಡಯಾಲಿಸಿಸ್ ಸೇವೆ ಒದಗಿಸುವ ಅಗತ್ಯ ಹೆಚ್ಚಾಗಿದೆ. ಈ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ನೂತನ ನೆಫ್ರೋ-ಯುರಾಲಜಿ ಘಟಕ ಹಾಗೂ ಸಬ್ಸಿಡಿ ದರದ ಡಯಾಲಿಸಿಸ್ ಸೇವೆ ಸಾರ್ವಜನಿಕರಿಗೆ ನೆರವಾಗಲಿದೆ ಎಂದು ಡಾ. ರವಿ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ಬೆಳಗಾವಿ ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ಚಿಕಿತ್ಸಾ ಸೇವೆ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಅಭೀಪ್ರಾಯ ಪಟ್ಟರು.

ಈ ವೇಳೆ ಕೆಎಲ್ ಇ ಸಂಸ್ಥೆಯ ಡಾ. ಪ್ರಭಾಕರ್ ಕೋರೆ, ವೈಧ್ಯಕೀಯ ಕ್ಷೇತ್ರದ ಪ್ರಭಾವಿ ವೈಧ್ಯರು, ಡಾ. ರವಿ ಪಾಟೀಲ ನೂತನ್ ಆಸ್ಪತ್ರೆಯಲ್ಲಿ ಆಡಳಿತ ಮಂಡಳಿ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !