ಹೊಸದಿಗಂತ ವರದಿ ರಾಮನಗರ :
ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಶನಿವಾರ ದ್ವಿತಳಿ (ಬೈವೋಲ್ಟಿನ್) ಗೂಡಿನ ದರ ಕೆ.ಜಿಗೆ 1,025ಕ್ಕೆ ಮಾರಾಟವಾಗುವ ಮೂಲಕ ದಾಖಲೆ ಬರೆಯಿತು. ಮಿಶ್ರತಳಿ ರೇಷ್ಮೆ ಗೂಡಿಗೂ ಬಂಪರ್ ಬೆಲೆ ಬಂದಿದ್ದು, ಕೆ.ಜಿಗೆ 806ಕ್ಕೆ ಏರಿಕೆಯಾಗಿದೆ.
ಕಳೆದ ಒಂದು ತಿಂಗಳಿಂದ ಕೆ.ಜಿಗೆ 900 ಗಡಿಯ ಆಸುಪಾಸಿನಲ್ಲಿದ್ದ ದ್ವಿತಳಿ ಗೂಡಿನ ದರ ಐದು ದಿನಗಳ ಹಿಂದೆ ಸಾವಿರದ ಸನಿಹಕ್ಕೆ ಬಂದಿತ್ತು. ಈಗ ಸಾವಿರದ ಗಡಿ ದಾಟಿದ್ದು, ರೇಷ್ಮೆ ಬೆಳೆಗಾರರ ಮೊಗದಲ್ಲಿ ನಗು ತರಿಸಿದೆ.
ಮಿಶ್ರತಳಿ ಗೂಡಿನ ದರ ಸಹ ಏರುಗತಿಯಲ್ಲಿ ಸಾಗುತ್ತಾ ಬಂದಿದೆ. ಕಳೆದ ಒಂದು ತಿಂಗಳಿಂದ ಪ್ರತಿ ಕೆ.ಜಿ ಗೆ ಗರಿಷ್ಠ 600ಕ್ಕೆ ಮಾರಾಟವಾಗುತ್ತಿದ್ದ ಗೂಡು, ಮೂರು ದಿನಗಳಿಂದ 800ರ ಗಡಿ ದಾಟಿದ್ದು, ಈಗ ₹806ಕ್ಕೆ ಮಾರಾಟವಾಗಿದೆ.
ಮಾರುಕಟ್ಟೆಗೆ ಶನಿವಾರ 301 ಬೆಳೆಗಾರರು ಗೂಡು ತಂದಿದ್ದರು. ಅದರಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಪಾಲನಾಯಕನಕೋಟೆ ಗ್ರಾಮದ ರವಿ ತಂದಿದ್ದ 240 ಕೆ.ಜಿಗೆ ದ್ವಿತಳಿ ಗೂಡನ್ನು ರೀಲರ್ ನಾಸಿರುದ್ದೀನ್ ಅವರು ಪ್ರತಿ ಕೆ.ಜಿ.ಗೆ 1,025ರಂತೆ ಖರೀದಿ ಮಾಡಿದರು’ ಎಂದು ರಾಮನಗರ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ಕೈಲಾಸ ಮೂರ್ತಿ ಮಾಹಿತಿ ನೀಡಿದರು.
ಬೆಳೆಗಾರ ರವಿ ತಂದಿದ್ದ ಗುಣಮಟ್ಟದ ಗೂಡನ್ನು ರೀಲರ್‌ಗಳು ಖರೀದಿಸಲು ಮುಗಿಬಿದ್ದರು. ಅತಿ ಹೆಚ್ಚು ದರ ಪಡೆದ ರವಿ ಅವರನ್ನು ಮಾರುಕಟ್ಟೆ ವತಿಯಿಂದ ಸನ್ಮಾನಿಸಿ ಅಭಿನಂದನಾ ಪತ್ರ ಸಹ ನೀಡಲಾಯಿತು ಎಂದರು.
ಇದನ್ನೂ ಓದಿ:
ಬರದ ಕಾರಣಕ್ಕೆ ಮಾರುಕಟ್ಟೆಗೆ ಬರುವ ರೇಷ್ಮೆಗೂಡಿನ ಆವಕದ ಪ್ರಮಾಣ ಕಡಿಮೆಯಾಗಿದೆ. ಬೆಳೆಗಾರರು ತರುವ ದ್ವಿತಳಿ ಮತ್ತು ಮಿಶ್ರತಳಿ ಗೂಡಿಗೆ ಬಂಪರ್ ಬೆಲೆ ಸಿಗುತ್ತಿದೆ. ತೋಟದಲ್ಲಿ ಹಿಪ್ಪುನೇರಳೆ ಸೊಪ್ಪಿನ ಇಳುವರಿ ಕುಂಠಿತವಾಗಿದೆ. ಅಲ್ಲದೆ, ಸದಾ ಹಸಿರಾಗಿರುವ ಹಿಪ್ಪುನೇರಳೆ ಗಿಡಕ್ಕೆ ರೋಗಬಾಧೆ ಕಾಡುತ್ತಿದೆ. ಇದರಿಂದಾಗಿ ರೇಷ್ಮೆ ಗೂಡಿನ ಉತ್ಪಾದನೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿದೆ ಎಂದು ರೇಷ್ಮೆ ಗೂಡು ಮಾರುಕಟ್ಟೆ ಅಧಿಕಾರಿಗಳು ತಿಳಿಸಿದರು.
ದ್ವಿತಳಿ ರೇಷ್ಮೆ ಗೂಡಿಗೆ ಉತ್ತಮ ಧಾರಣೆ ಸಿಗುತ್ತಿರುವುದರಿಂದ ಬೆಳೆಗಾರರು, ಮಿಶ್ರತಳಿಗಿಂತ ಹೆಚ್ಚಾಗಿ ದ್ವಿತಳಿಯತ್ತ ಚಿತ್ತ ಹರಿಸಿದ್ದಾರೆ. ದೇಶೀಯ ಸೀರೆ ಮತ್ತಿತರ ಸಿದ್ದ ಉಡುಪಿನಲ್ಲಿ ದ್ವಿತಳಿ ರೇಷ್ಮೆ ಹೆಚ್ಚಾಗಿ ಬಳಕೆಯಾಗುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದರು.



