ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಕ್ಸ್ ಆಫೀಸ್ನಲ್ಲಿ ಮತ್ತೆ ಧೂಳೆಬ್ಬಿಸೋಕೆ ಬಾಲಿವುಡ್ ಬೇಬೋ ಕರೀನಾ ಕಪೂರ್ ರೆಡಿಯಾಗಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ‘ದಾಯರಾ’ ಅನ್ನೋ ಹೊಸ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ಸೌಂಡ್ ಮಾಡ್ತಿದೆ. ಈ ಸಿನಿಮಾದಲ್ಲಿ ಕರೀನಾ ಜೊತೆ ಸೌತ್ ಸೂಪರ್ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಕೂಡ ಖಡಕ್ ಪೋಲಿಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.
ನೈಜ ಘಟನೆಗಳನ್ನಿಟ್ಟುಕೊಂಡು ಮಾಡಿರೋ ಈ ಕ್ರೈಮ್ ಥ್ರಿಲ್ಲರ್ ಕಥೆಯಲ್ಲಿ ಕರೀನಾ ಡಿಸಿಪಿ ಅಜೂನಿ ಕೊಹ್ಲಿ ಪಾತ್ರದಲ್ಲಿದ್ರೆ, ಪೃಥ್ವಿರಾಜ್ ಡಿಸಿಪಿ ರಾಮನ್ ಕುಮಾರ್ ಆಗಿ ಮಿಂಚಿದ್ದಾರೆ.

ಟ್ರೇಲರ್ನಲ್ಲಿ ಏನಿದೆ?
ಊರಲ್ಲಿ ನಡೆದ ಒಂದು ಗ್ಯಾಂಗ್ ರೇಪ್ ಕೇಸ್ ಸುತ್ತ ಇಡೀ ಕಥೆ ತಿರುಗುತ್ತೆ. ಟ್ರೇಲರ್ನಲ್ಲೇ ಎದೆ ಜಲ್ ಅನ್ನುವಂಥ ಸೀನ್ಗಳಿವೆ. ಮಗಳನ್ನು ಕಳೆದುಕೊಂಡು ತಾಯಿ ಗೋಳಾಡೋ ದೃಶ್ಯದಿಂದ ಟ್ರೇಲರ್ ಶುರುವಾಗುತ್ತೆ. ಈ ಕಡೆ ಪೃಥ್ವಿರಾಜ್ ಸಾಕ್ಷಿ-ಕೋರ್ಟ್ ಅಂತ ಕಾಯದೆ, ಆ ಮೈನರ್ ಅಪರಾಧಿಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ಎನ್ಕೌಂಟರ್’ ಮಾಡಿ ಮುಗಿಸ್ತಾರೆ.
ಇತ್ತ ಕರೀನಾ ಕಪೂರ್ ಎಂಟ್ರಿ ಕೊಟ್ಟು, ಏನ್ ಸರ್, ಮುಂಚೆನೂ ಹೀಗೆ ಮೂರ್ನಾಲ್ಕು ಎನ್ಕೌಂಟರ್ ಸೆಲ್ಫ್ ಡಿಫೆನ್ಸ್ ಅಂತ ಮಾಡಿ ಮುಗಿಸಿದ್ದೀರಲ್ಲ? ಅಂತ ಪೃಥ್ವಿರಾಜ್ ಆಟಕ್ಕೆ ಬ್ರೇಕ್ ಹಾಕಲು ತನಿಖೆ ಶುರು ಮಾಡ್ತಾರೆ. ಆ ಆರೋಪಿಗಳಲ್ಲಿ ಒಬ್ಬನಿಗೆ ಇನ್ನೂ 17 ವರುಷ ಅಂತ ಕರೀನಾ ಕಾನೂನಿನ ನಿಯಮ ನೆನಪಿಸುತ್ತಾರೆ.
ಆದರೆ, ಟ್ರೇಲರ್ ಕೊನೆಯಲ್ಲಿ ಬರೋ ಡೈಲಾಗ್ ನಿಜಕ್ಕೂ ಪ್ರತಿಯೊಬ್ಬರನ್ನೂ ಯೋಚನೆ ಮಾಡುವಂತೆ ಮಾಡುತ್ತೆ. “ನಾನ್ ಏನೇ ಮಾಡಿದ್ರೂ ಕಾನೂನಿನ ಗಡಿ ಒಳಗಡೆನೇ ಮಾಡೋದು” ಅಂತ ಕರೀನಾ ಹೇಳಿದ್ರೆ, “ಅಷ್ಟೊಂದು ಕ್ರೂರವಾಗಿ ತಪ್ಪು ಮಾಡಿದ ಅಪ್ರಾಪ್ತನಿಗೆ ಕಾನೂನಿನ ರಕ್ಷಣೆ ಯಾಕೆ ಸಿಗಬೇಕು?” ಅಂತ ಪೃಥ್ವಿರಾಜ್ ಪ್ರಶ್ನೆ ಮಾಡ್ತಾರೆ.
ನಿಜವಾದ ನ್ಯಾಯ ಅಂದ್ರೆ ಏನು? ಅದು ಕಾನೂನಿನ ಒಳಗಡೆ ಸಿಗುತ್ತಾ ಅಥವಾ ಕಾನೂನು ಮೀರಿ ನಿಲ್ಲಬೇಕಾ? ಅನ್ನೋ ದೊಡ್ಡ ಪ್ರಶ್ನೆಯನ್ನ ಈ ಟ್ರೇಲರ್ ಜನರ ಮುಂದೆ ಇಟ್ಟಿದೆ. ಒಟ್ಟಿನಲ್ಲಿ ಕರೀನಾ ಮತ್ತು ಪೃಥ್ವಿರಾಜ್ ಅವರ ಈ ಜುಗಲ್ಬಂದಿ ಚಿತ್ರಮಂದಿರದಲ್ಲಿ ಧೂಳೆಬ್ಬಿಸೋದಂತೂ ಗ್ಯಾರಂಟಿ.



