ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಸ್ ಮಹಾರಾಜ ರವಿತೇಜ ಅವರ ಹೊಸ ಸಿನಿಮಾ ‘ಇರುಮುಡಿ’ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ದಿನ ದಿನಕ್ಕೂ ಭರ್ಜರಿ ಕಲೆಕ್ಷನ್ ಕಾಣ್ತಿದೆ. ಎರಡನೇ ಶನಿವಾರ ಒಂದೇ ದಿನ ಇಂಡಿಯಾದಲ್ಲಿ ಬರೋಬ್ಬರಿ 14.50 ಕೋಟಿ ಕಲೆಕ್ಟ್ ಮಾಡಿದ್ದು, ಭಾರತದಲ್ಲಿ ಒಟ್ಟು ಕಲೆಕ್ಷನ್ 134 ಕೋಟಿ ದಾಟಿದೆ.

ವಿದೇಶಗಳಲ್ಲೂ ಈ ಸಿನಿಮಾ ಕ್ರೇಜ್ ಕಮ್ಮಿ ಇಲ್ಲ, ಓವರ್‌ಸೀಸ್‌ನಲ್ಲೇ 16 ಕೋಟಿಗೂ ಹೆಚ್ಚು ಕಲೆಕ್ಷನ್ ಬಾಚಿಕೊಂಡಿದೆ. ಎಲ್ಲ ಸೇರಿ ವಿಶ್ವದಾದ್ಯಂತ 153 ಕೋಟಿ ಗಳಿಸಿ ಜಬರ್ದಸ್ತ್ ಪ್ರದರ್ಶನ ಕಾಣ್ತಿದೆ.

ತೆಲುಗು ರಾಜ್ಯಗಳಲ್ಲಂತೂ ಸಿನಿಮಾ ನೋಡೋಕೆ ಜನ ಮುಗಿಬಿದ್ದು ಬರ್ತಿದ್ದಾರೆ. 2ನೇ ಶುಕ್ರವಾರದ ಕಲೆಕ್ಷನ್‌ನಲ್ಲಿ ‘RRR’ ಬಿಟ್ಟರೆ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಅನ್ನೋ ಹೆಗ್ಗಳಿಕೆಗೆ ‘ಇರುಮುಡಿ’ ಪಾತ್ರವಾಗಿದೆ. ಇನ್ನು 2ನೇ ಶನಿವಾರ ತೆಲುಗು ನಾಡಿನಲ್ಲಿ 13 ಕೋಟಿ ರೂ. ಗಳಿಸಿದ್ದು, ‘RRR’ ಮತ್ತು ‘ಪುಷ್ಪ 2’ ನಂತರದ ಸಾಲಿನಲ್ಲಿ ನಿಂತಿದೆ. ಬೇರೆ ದೊಡ್ಡ ಸಿನಿಮಾಗಳ ಜೊತೆ ಪೈಪೋಟಿ ಇದ್ದರೂ, ಟಿಕೆಟ್ ದರ ಕಮ್ಮಿ ಇದ್ದರೂ ಸಹ ಇಷ್ಟೊಂದು ಕಲೆಕ್ಷನ್ ಮಾಡಿರೋದು ನಿಜಕ್ಕೂ ಸಣ್ಣ ವಿಷಯವಲ್ಲ.

ಒಂಬತ್ತೇ ದಿನಗಳಲ್ಲಿ ತೆಲುಗು ರಾಜ್ಯಗಳಿಂದಲೇ 120 ಕೋಟಿ ರೂ. ಬಾಚಿಕೊಂಡಿರೋ ‘ಇರುಮುಡಿ’, ಇನ್ನೊಂದೆರಡು ದಿನಗಳಲ್ಲಿ 150 ಕೋಟಿ ಗಡಿ ದಾಟಿ, ನಾಲ್ಕನೇ ವಾರಕ್ಕೆ 200 ಕೋಟಿಯ ಕ್ಲಬ್‌ಗೆ ಸೇರೋದು ಗ್ಯಾರಂಟಿ ಆಗಿದೆ.

ಎಲ್ಲಕ್ಕಿಂತ ದೊಡ್ಡ ಹೈಲೈಟ್ ಅಂದ್ರೆ, ರವಿ ತೇಜ ಅವರು ಈ ಸಿನಿಮಾಗೆ ತಮ್ಮ ಮಾಮೂಲಿ ಏಳರಿಂದ ಎಂಟು ಕೋಟಿ ಆದಾಯದ ಬದಲಿಗೆ ನಿಜಾಮ್ ಪ್ರದೇಶದ ಡಿಸ್ಟ್ರಿಬ್ಯೂಷನ್ ಹಕ್ಕುಗಳನ್ನು ತೆಗೆದುಕೊಂಡಿದ್ದರು. ಈಗ ನಿಜಾಮ್ ಒಂದರಲ್ಲೇ ಸಿನಿಮಾ 100 ಕೋಟಿ ದಾಟುವ ಲಕ್ಷಣ ಕಾಣಿಸುತ್ತಿದ್ದು, ಮಾಸ್ ಮಹಾರಾಜನ ಖಾತೆಗೆ 50 ಕೋಟಿಗೂ ಹೆಚ್ಚು ಲಾಭ ಬರುವುದು ಖಚಿತವಾಗಿದೆ.



