ಹೊಸದಿಗಂತ ವರದಿ ರಾಮನಗರ:
ನಕಲಿ ನೋಟು ತಯಾರಿಕೆ ಜಾಲವನ್ನು ಬೇಧಿಸಿರುವ ಐಜೂರು ಠಾಣೆ ಪೊಲೀಸರು 7 ಮಂದಿಯನ್ನು ಬಂಧಿಸಿ, 500ರೂ ಮುಖ ಬೆಲೆಯ 5 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಶಾಂತಿಲಾಲ್ ಲೇ ಔಟ್ ಬಡಾವಣೆ ಪಕ್ಕದ ಜೀಗೇನಹಳ್ಳಿಯ ಹೊಸ ಬಡಾವಣೆಯಲ್ಲಿ ಖೋಟಾ ನೋಟು ಜಾಲ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಜೀಗೇನಹಳ್ಳಿಯ ಹೊಸ ಬಡಾವಣೆಯ ನಿರ್ಮಾಣ ಹಂತದ ಮನೆಯ ಮೇಲೆ ಸೋಮವಾರ ದಾಳಿ ನಡೆಸಿದ ಪೊಲೀಸರು ಮನೆ ಮಾಲೀಕ ಸಂತೋಷ್, ಸಂಪತ್, ಗೋವಿಂದ ರಾಜ್, ರೇಣುಕಾ ರಾಜ್, ಶಿವರಾಜ್ ಮತ್ತು ಸತೀಶ್ ಎಂಬುವವರನ್ನು ಬಂಧಿಸಿದ್ದಾರೆ. ನಕಲಿ ನೋಟು ತಯಾರಿಸಲು ಬಳಸುತ್ತಿದ್ದ ಪೇಪರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಯೂಟ್ಯೂಬರ್ ನಿಂದ ಸಿಕ್ತು ಮಾಹಿತಿ
ಹೊರ ರಾಜ್ಯದ ಸಂಪತ್ ಎಂಬುವವನು ಜಾಲದ ಸೂತ್ರಧಾರನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮನೆ ಮಾಲೀಕ ಸಂತೋಷ್ ಕಮೀಷನ್ ಆಸೆಗೆ ತನ್ನ ಮನೆಯನ್ನು ದಂಧೆಗೆ ನೀಡಿದ್ದನು ಎಂಬುದಾಗಿ ತಿಳಿದುಬಂದಿದೆ. ಯೂಟ್ಯೂಬರ್ ಒಬ್ಬರು ನೀಡಿದ ಖಚಿತ ಮಾಹಿತಿ ಮೇರೆಗೆ ಐಜೂರು ಠಾಣೆ ಪೊಲೀಸರು ದಾಳಿ ನಡೆಸಿದಾಗ ಖೋಟಾ ನೋಟು ದಂಧೆ ಬೆಳಕಿಗೆ ಬಂದಿದೆ.
ಬಿಳಿ ಪೇಪರ್ನ ಬಂಡಲ್ಗೆ ಕೆಮಿಕಲ್ ಲೇಪಿಸಿ, ಅದನ್ನು ನೋಟಿನ ಅಳತೆಗೆ ಕಟ್ ಮಾಡಿ ಒದಗಿಸಿದ್ದಾರೆ. ಒಟ್ಟು 5 ಲಕ್ಷ ರೂ ಮೌಲ್ಯದ ನಕಲಿ ನೋಟಿಗೆ ಇಲ್ಲಿ ಪೇಪರ್ ರೆಡಿ ಮಾಡಲಾಗಿತ್ತು. ಇಲ್ಲಿ ತಯಾರಾದ ಪೇಪರ್ಗಳನ್ನ ಬೇರೆಕಡೆಗೆ ರವಾನೆ ಮಾಡಿ, ಅಲ್ಲಿ ಪೂರ್ಣ ಪ್ರಮಾಣದ ನಕಲಿ ನೋಟ್ ತಯಾರಿಸಲಾಗುತ್ತಿತ್ತು. ಜಾಲದ ಹಿಂದೆ ಮತ್ತಷ್ಟು ಜನ ಭಾಗಿಯಾಗಿರುವ ಸಾಧ್ಯತೆ ಇದ್ದು, ತನಿಖೆ ನಡೆಸಲಾಗುತ್ತಿದೆ ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾಹಿತಿ ನೀಡಿದರು.



